ರೇಷ್ಮೆ ಬೆಳೆ ರೋಗ ನಿಯಂತ್ರಣ


ಬೆಂಗಳೂರು, ಸೆ. ೨೪- ರಾಜ್ಯದಲ್ಲಿ ಹಿಪ್ಪುನೆರಳೆ ಬೆಳೆಗಳಲ್ಲಿ ಕಂಡು ಬರುವ ನುಸಿ, ಹೇನು ಮತ್ತು ಸುರಳಿ ರೋಗ ನಿಯಂತ್ರಣದಲ್ಲಿದೆ ಎಂದು ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ ವಿಧಾನಪರಿಷತ್‌ನಲ್ಲಿಂದು ಹೇಳಿದರು.
ಕೆಲವು ಜಿಲ್ಲೆಗಳಲ್ಲಿ ಇದರ ನಿಯಂತ್ರಣದಲ್ಲಿಲ್ಲ ಎನ್ನುವ ದೂರುಗಳು, ಮನವಿಗಳು ಬಂದಿವೆ. ಈ ಸಂಬಂಧ ಶೀಘ್ರದಲ್ಲಿ ಹಿರಿಯ ಅಧಿಕಾರಿಗಳು ಮತ್ತು ತಜ್ಞರ ಜತೆ ಚರ್ಚಿಸಿ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎಸ್. ರವಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ೨೦೨೦-೨೧ನೇ ಸಾಲಿನಲ್ಲಿ ೧ ಲಕ್ಷ ೭ಸಾವಿರ, ೪೭೧.೭೧ ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೆರಳೆ ಬೆಳೆಯಲಾಗುತ್ತಿದೆ. ಇದು ಬಹುತೇಕ ರೈತರ ಆಧಾರ ಎನ್ನುವುದು ತಿಳಿದಿದೆ. ರೈತರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಚಾಮರಾಜನಗರ, ಮೈಸೂರು, ಶಿವಮೊಗ್ಗ, ತುಮಕೂರು, ಹಾವೇರಿ, ಯಾದಗಿರಿ, ಮಂಡ್ಯ ಮತ್ತು ಬಳ್ಳಾರಿ ಜಿಲ್ಲೆಗಳ ಹಿಪ್ಪುನೆರಳೆ ತೋಟಗಳಲ್ಲಿ ಹೇನು ಮತ್ತು ನುಸಿರೋಗ ಹಾಗೂ ಸುರಳಿ ರೋಗ ಶೇ. ೫ ರಿಂದ ೧೦ ರಷ್ಟು ಕಂಡು ಬಂದಿದೆ. ಕಡಿಮೆ ಅಂತರದಲ್ಲಿ ಹಾಗೂ ನೆರಳಿನಲ್ಲಿ ಹಿಪ್ಪುನೆರಳೆ ಬೆಳೆಯುವುದರಿಂದ ಈ ಕೀಟಗಳ ಬಾಧೆ ಕಂಡು ಬಂದಿದೆ ಎಂದು ಹೇಳಿದರು.
ವಿವಿಧ ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಮತ್ತು ಅಧಿಕಾರಿಗಳ ತಂಡ ಅಧ್ಯಯನ ನಡೆಸಿ ಹೇನು, ನುಸಿರೋಗ, ಸುರಳಿ ಪೋಚಿ ರೋಗ ತಡೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಶಿಫಾರಸ್ಸು ಮಾಡಿದೆ ಎಂದು ಹೇಳಿದರು.