ರೇಷ್ಮೆ ಇಲಾಖೆ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ

ಕೋಲಾರ, ಆ. ೧-ರೇಷ್ಮೆ ಹಿಪ್ಪು ನೇರಳೆ ಸೊಪ್ಪಿಗೆ ಬಾಧಿಸುತ್ತಿರುವ ನುಸಿ ರೋಗಕ್ಕೆ ಉಚಿತ ಗುಣಮಟ್ಟದ ಔಷಧಿಯನ್ನು ವಿತರಣೆ ಮಾಡಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ರೈತಸಂಘದಿಂದ ರೋಗದ ಸೊಪ್ಪಿನ ಸಮೇತ ರೇಷ್ಮೆ ಇಲಾಖೆ ಎದುರು ಪ್ರತಿಭಟನೆ ನಡೆಸಿ, ಸಹಾಯಕ ನಿರ್ದೇಶಕರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಜಿಲ್ಲೆಯ ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿರುವ ಹಾಗೂ ಸ್ವಾಭಿಮಾನದ ಬದುಕನ್ನು ಕಲ್ಪಿಸುತ್ತಿರುವ ರೇಷ್ಮ ಉದ್ಯಮ ಇತ್ತೀಚೆಗೆ ರೇಷ್ಮೆ ತೋಟಗಳಿಗೆ ಬಾಧಿಸುತ್ತಿರುವ ನುಸಿ ಹಾಗೂ ಬೊಬ್ಬೆ ರೋಗದಿಂದ ರೈತರು ಹೈರಾಣಾಗಿದ್ದು, ಸರ್ಕಾರದಿಂದ ಗುಣಮಟ್ಟದ ಔಷಧಿಗಾಗಿ ಇಲಾಖೆಯ ಅಧಿಕಾರಿಗಳ ಕಡೆ ಮುಖ ಮಾಡಿದ್ದಾರೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.
ಸಾಂಕ್ರಾಮಿಕ ರೋಗಗಳ ಹಾವಳಿಯಿಂದ ೨ ವರ್ಷ ದುಡಿಯುವ ಕೈಗೆ ಕೆಲಸವಿಲ್ಲದ ಸಮಯದಲ್ಲಿ ರೈತ ಪರ್ಯಾಯವಾಗಿ ೧೦೦ ಮೊಟ್ಟೆ ರೇಷ್ಮೆ ಸಾಕಾಣಿಕೆ ಮಾಡಿ ಸ್ವಾಭಿಮಾನದ ಜೀವನ ಮಾಡುತ್ತಿದ್ದ. ಇದಕ್ಕೆ ೩ ತಿಂಗಳಿಂದ ರೇಷ್ಮೆ ಸೊಪ್ಪಿಗೆ ಬಾಧಿಸುತ್ತಿರುವ ರೋಗಗಳಿಂದ ರೇಷ್ಮೆ ತೋಟ ನಾಶವಾಗಿ ಕೊಂಡು ಮೇಯಿಸುವ ರೈತರ ಪಾಡು ಹೀನಾಯವಾಗಿದೆ.
ಸಿಬ್ಬಂದಿ ಕೊರತೆ:
ರೇಷ್ಮೆ ಇಲಾಖೆಯಲ್ಲಿ ಜಿಲ್ಲಾದ್ಯಂತ ೨೧೪ ಜನ ಸಿಬ್ಬಂದಿಗೆ ಕೇವಲ ೪೨ ಜನ ಮಾತ್ರ ಕೆಲಸ ನಿರ್ವಹಿಸುತ್ತಿದ್ದು, ಇನ್ನು ೧೭೨ ಸಿಬ್ಬಂದಿ ಕೊರತೆಯಿದೆ. ಇದರಿಂದ ರೈತರಿಗೆ ಸಮರ್ಪಕವಾದ ಮಾಹಿತಿ ನೀಡಲು ಹಾಗೂ ಇಲಾಖೆಯಲ್ಲಿ ಕೆಲಸಗಳು ಆಗದೆ ತಿಂಗಳಾನುಗಟ್ಟಲೇ ಅಲೆಯಬೇಕಾದ ಪರಿಸ್ಥಿತಿ ಇದ್ದರೂ ಸರ್ಕಾರ ರೇಷ್ಮೆ ಇಲಾಖೆಯತ್ತ ಗಮನಹರಿಸದೇ ಇರುವುದು ದುರಾದೃಷ್ಟಕರ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ಕೇಂದ್ರ ಸರ್ಕಾರ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಜಲ್ಲಿ, ಸಿಮೆಂಟ್, ಕಂಬಿ ಹಾಗೂ ಕೂಲಿಕಾರ್ಮಿಕರ ವೆಚ್ಚ ಹೆಚ್ಚಿಸಿರುವುದರಿಂದ ಸರ್ಕಾರ ರೇಷ್ಮೆ ಮನೆ ನಿರ್ಮಾಣಕ್ಕೆ ನೀಡುತ್ತಿರುವ ೩ ಲಕ್ಷ, ೨.೨೫ ಲಕ್ಷ ಹಾಗೂ ೬೩ ಸಾವಿರದ ಅನುದಾನವನ್ನು ಕನಿಷ್ಠಪಕ್ಷ ೫ ಲಕ್ಷಕ್ಕೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಹೋರಾಟದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಪದ್ಮಘಟ್ಟ, ನಂಗಲಿ ನಾಗೇಶ್, ಕಿಶೋರ್, ಧರ್ಮ ಯುವ ರೈತ ಮುಖಂಡ ಪೊಂಬರಹಳ್ಳಿ ನವೀನ್, ವಿಭಾಗೀಯ ಕಾರ್ಯದರ್ಶಿ ಫಾರೂಖ್‌ಪಾಷ, ರಾಜ್ಯ ಮುಖಂಡ ಬಂಗಾರಿ ಮಂಜು, ತಾಲೂಕು ಪ್ರಧಾನ ಕಾರ್ಯದರ್ಶಿ, ಭಾಸ್ಕರ್, ವಿಶ್ವ ಮೇಲಗಾಣಿ ವಿಜಯ್ ಪಾಲ್, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಯಲ್ಲಣ್ಣ, ಅಣ್ಣಿಹಳ್ಳಿ ನಾಗರಾಜ್, ಹೆಬ್ಬಣಿ ರಾಮಮೂತಿ, ಮಂಗಸಂರ ತಿಮ್ಮಣ್ಣ, ಕೇಶವ, ವೇಣು, ಸುನೀಲ್‌ಕುಮಾರ್ ಮುಂತಾದವರಿದ್ದರು.