ರೇಷ್ಮೆ ಇಲಾಖೆ ಕಚೇರಿ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮೇ.27: ಇಲ್ಲಿನ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸ್ಥಳಾಂತರಿಸುವ ಸರ್ಕಾರದ ತೀರ್ಮಾನ ವಿರೋಧಿಸಿ ರೇಷ್ಮೆ ಬೆಳೆಗಾರರು ಪ್ರತಿಭಟಿಸಿದರು.
ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನೆ ಮುಖ್ಯ ರಸ್ತೆಯ ಮೂಲಕ ಸಾಗಿ ಶಾಸ್ತ್ರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ರೇಷ್ಮೆ ಇಲಾಖೆ ಕಚೇರಿ ಸ್ಥಳಾಂತರಿಂದ ರೇಷ್ಮೆ ಬೆಳೆಗಾರರು ತೊಂದರೆ ಅನುಭವಿಸಬೇಕಾಗುತ್ತದೆ. ಇಲಾಖೆ ಸೌಲಭ್ಯ, ಸಹಾಯಧನಗಳು ಮರೀಚಿಕೆಯಾಗಲಿವೆ. ತಾಲೂಕಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ರೇಷ್ಮೆ ಕೃಷಿ ಅಳವಡಿಸಿಕೊಂಡಿದ್ದು, ರೈತರು ಸೌಲಭ್ಯ ವಂಚಿತರಾಗಲಿದ್ದಾರೆ. ಸರ್ಕಾರ ಈ ಕಚೇರಿ ಸ್ಥಳಾಂತರ ಆದೇಶ ಹಿಂಪಡೆದು ಇಲ್ಲಿಯೇ ಯಥಾಸ್ಥಿತಿಯಲ್ಲಿ ಮುಮದುವರಿಸಬೇಕು ಎಂದು ರೇಷ್ಮೆ ಬೆಳೆಗಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತರಾದ ಎಸ್.ಮಂಜುನಾಥ, ಬಸವರಾಜ, ಕೆ.ಸುರೇಶ, ಗಿರಿಯಪ್ಪ, ಪುಂಡಲೀಕ, ನಿಂಗಪ್ಪ, ಕೆ.ಮಂಜುನಾಥ, ರಾಮಕೃಷ್ಣ, ಶೇಖರನಾಯ್ಕ, ರೈತ ಸಂಘದ ಅಧ್ಯಕ್ಷೆ ಎಸ್.ಯಶೋಧಾ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.