
ಕೋಲಾರ, ಮಾ. ೧೮- ಮಹಾತ್ಮಗಾಂಧಿ ನರೇಗಾ ಯೋಜನೆಯ ೨೦೨೨-೨೩ನೇ ಸಾಲಿನ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕೋಲಾರ ತಾಲ್ಲೂಕು ರೇಷ್ಮೆ ಇಲಾಖೆಗೆ ಅತ್ಯುತ್ತಮ ತಾಲ್ಲೂಕು ಮಟ್ಟದ ರೇಷ್ಮೆ ಇಲಾಖೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಪ್ರತಿ ಪ್ರಶಸ್ತಿಗೆ ನಿಗಧಿಪಡಿಸಲಾದ ಮಾನದಂಡಗಳಿಗೆ ಅನುಗುಣವಾಗಿ ಜಿಲ್ಲಾ ಪಂಚಾಯಿತಿಗಳು ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ರಾಜ್ಯಮಟ್ಟದ ಆಯ್ಕೆ ಸಮಿತಿ ಮೌಲ್ಯಮಾಪನ ಮಾಡಿ ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಿರುವುದಾಗಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಆಯುಕ್ತರು ನೀಡಿರುವ ಆದೇಶದಲ್ಲಿ ತಿಳಿಸಲಾಗಿದೆ.
ಪ್ರಶಸ್ತಿಯನ್ನು ಮಾ.೨೪ ರಂದು ಬೆಂಗಳೂರಿನಲ್ಲಿ ನಡೆಯುವ ನರೇಗಾ ಹಬ್ಬದ ಕಾಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ರೇಷ್ಮೆ ಇಲಾಖೆ ಮಹತ್ತರ ಸಾಧನೆ
ಕೋಲಾರ ತಾಲ್ಲೂಕು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಈ ಕುರಿತು ಸಂತಸ ವ್ಯಕ್ತಪಡಿಸಿದ್ದು, ನರೇಗಾದಲ್ಲಿ ೨೦೧೯-೨೦ ರಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಜಿಲ್ಲೆಯ ರೇಷ್ಮೆ ಇಲಾಖೆಗೆ ಲಭ್ಯವಾಗಿತ್ತು. ಇದೀಗ ೨೦೨೨-೨೩ಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಕೋಲಾರ ತಾಲ್ಲೂಕಿಗೆ ಲಭ್ಯವಾಗಿದೆ ಎಂದು ತಿಳಿಸಿದರು.
ನರೇಗಾ ಅನುಷ್ಠಾನದಲ್ಲಿ ರಾಜ್ಯದ ರೇಷ್ಮೆ ಇಲಾಖೆಯಲ್ಲಿಯೇ ಕೋಲಾರ ತಾಲ್ಲೂಕಿನ ರೇಷ್ಮೆ ಇಲಾಖೆ ಅತ್ಯಧಿಕ ಮಾನವ ದಿನಗಳ ಸೃಜನೆ ಮಾಡಿದ ಸಾಧನೆಯನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬೈವೋಲ್ಟೈನ್ ತಳಿ ಗೂಡಿನ ಉತ್ಪಾದನೆಯಲ್ಲಿ ಬಂಗಾರಪೇಟೆ ಹೊರತು ಪಡಿಸಿ ಕೋಲಾರ ತಾಲ್ಲೂಕು ಹೆಚ್ಚು ಉತ್ಪಾದನೆ ಮಾಡುವ ಗೌರವಕ್ಕೆ ಪಾತ್ರವಾಗಿದೆ. ಕೋಲಾರ ತಾಲ್ಲೂಕಿನಲ್ಲಿ ಪ್ರತಿತಿಂಗಳು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕಳೆದ ಐದು ವರ್ಷಗಳಿಂದ ದ್ವಿತಳಿ ಬೆಳೆಗಾರರಿಗೆ ತಾಂತ್ರಿಕ ಮಾಹಿತಿ ನೀಡುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರತಿ ಹೋಬಳಿ ಕೇಂದ್ರದಲ್ಲೂ, ಆಯ್ದ ಗ್ರಾಮಗಳಲ್ಲಿ ಮತ್ತು ಅಗತ್ಯವಿರುವ ಗ್ರಾಮಗಳಲ್ಲಿ ದ್ವಿತಳಿ ಉತ್ಪಾದನೆಗೆ ಪ್ರೋತ್ಸಾಹಿಸಲು ಕೇಂದ್ರ ರೇಷ್ಮೆ ಮಂಡಳಿ, ಕೆವಿಕೆ.ವಿಜ್ಞಾನಿಗಳು ಮತ್ತು ಇಲಾಖೆಯ ತಜ್ಞರು ತಾಂತ್ರಿಕ ಮಾಹಿತಿ ರೈತರಿಗೆ ತಲುಪಿಸುವ ಕೆಲಸ ಸತತವಾಗಿ ನಡೆಯುತ್ತಿದೆ ಎಂದು ತಿಳಿಸಿರುವ ಈ ಎಲ್ಲಾ ಕಾರಣಗಳಿಂದ ನರೇಗಾದಲ್ಲಿ ಇಲಾಖೆ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಇಲಾಖೆಯ ಕಾರ್ಯಕ್ರಮಗಳು, ಸಹಾಯಧನ ನೀಡಿಕೆ ಕಾರ್ಯ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವುದು ನರೇಗಾದಲ್ಲಿನ ಈ ಸಾಧನೆಗೆ ಮತ್ತೊಂದು ಕಾರಣವಾಗಿದೆ ಎಂದು ವಿವರಿಸಿದ್ದು, ಈ ಸಾಧನೆಗೆ ಜಿಪಂ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನ, ಇಲಾಖೆಯ ಜಿಲ್ಲೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಮತ್ತು ರೇಷ್ಮೆ ಬೆಳೆಗಾರರ ಸಹಕಾರವೇ ಕಾರಣ ಎಂದು ತಿಳಿಸಿದ್ದಾರೆ.