ರೇಷ್ಮೆಕೃಷಿ ವಿಜ್ಞಾನಿಗಳಿಂದ ರೈತರ ತೋಟಗಳಿಗೆ ಭೇಟಿ

ಕೋಲಾರ, ಜು.೨೭: ಹಿಪ್ಪುನೇರಳೆ ಸೊಪ್ಪಿಗೆ ತಗುಲಿರುವ ಮೈಟ್ಸ್‌ನುಸಿ ಪೀಡಿತ ತೋಟಗಳಿಗೆ ಕೋಲಾರದ ಕೃಷಿ ವಿಜ್ಞಾನ ಕೇಂದ್ರದ ರೇಷ್ಮೆ ಕೃಷಿ ವಿಜ್ಞಾನಿ ಡಾ.ಕೆ.ಆರ್.ಶಶಿಧರ್ ನೇತೃತ್ವದ ರೇಷ್ಮೆ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ರೈತರಿಗೆ ಅರಿವು ಮೂಡಿಸಿತು.
ರೇಷ್ಮೆ ಇಲಾಖೆ, ತಾಂತ್ರಿಕ ಸೇವಾ ಕೇಂದ್ರ ವೇಮಗಲ್ ಹಾಗೂ ಕೃಷಿ ವಿಜ್ಞಾನ ಕೇಂದ್ರ, ಕೋಲಾರ ಸಹಯೋಗದಲ್ಲಿ ವಿಜ್ಞಾನಿ ಮತ್ತು ಅಧಿಕಾರಿಗಳ ತಂಡವು ವೇಮಗಲ್ ಹೋಬಳಿಯ ಅಮ್ಮನಲ್ಲೂರು ಹಾಗೂ ಬೀಚಗೊಂಡಹಳ್ಳಿ ಗ್ರಾಮಗಳಲ್ಲಿ ಹಿಪ್ಪುನೇರಳೆ ಬೆಳೆಯಲ್ಲಿ ಕಂಡುಬಂದಿರುವ ಮೈಟ್ಸ್‌ನುಸಿ ಪೀಡಿತ ತೋಟಗಳಿಗೆ ಭೇಟಿ ನೀಡಿ ರೇಷ್ಮೆ ಬೆಳೆಗಾರರಿಗೆ ನಿರ್ವಹಣಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ವಿಜ್ಞಾನಿ ಶಶಿಧರ್ ಮಾತನಾಡಿ, ಈ ಹಿಂದೆ ನಿರ್ಲಕ್ಷಿತ ಪೀಡೆಯಾಗಿದ್ದ ಮೈಟ್ಸ್ ನುಸಿಯು ೨೦೧೯ ರಿಂದ ಪ್ರಮುಖ ಪೀಡೆಯಾಗಿ ಬದಲಾಗಿದ್ದು ಇದರ ಹಾನಿಯ ತೀವ್ರತೆ ರೇಷ್ಮೆ ಕೃಷಿಕರನ್ನು ಆಂತಕಕ್ಕೆ ದೂಡಿದೆ. ಈ ಮೈಟ್ಸ್‌ನುಸಿಯು ವಾತವರಣದಲ್ಲಿ ೨೫ ರಿಂದ ೩೦ ಡಿಗ್ರಿ ಉಷ್ಣಾಂಶ ಮತ್ತು ಒಣಹವೆ ಹೆಚ್ಚಿರುವ ಪ್ರದೇಶಗಳಲ್ಲಿ ೭-೯ ದಿನಗಳಲ್ಲಿ ತನ್ನ ಜೀವನ ಚಕ್ರವನ್ನು ಮುಗಿಸುವುದರಿಂದ ಹಿಪ್ಪುನೇರಳೆ ತೋಟದಲ್ಲಿ ವೇಗವಾಗಿ ಹರಡಿ ಸೊಪ್ಪಿನ ಇಳುವರಿ ಮತ್ತು ಗುಣಮಟ್ಟ ಹಾಳುಮಾಡುತ್ತಿದ್ದು ಕಾಣಿಸಿಕೊಂಡ ೧೦ ದಿನಗಳೊಳಗೆ ಇಡೀ ತೋಟ ಹಾನಿಗೀಡಾಗುವುದನ್ನು ಇತ್ತೀಚಿನ ದಿನಗಳಲ್ಲಿ ನಾವು ಗಮನಿಸುತ್ತಿದ್ದೇವೆ ಎಂದರು.
ಈ ಪೀಡೆಯ ಪ್ರಮುಖ ಲಕ್ಷಣಗಳೆಂದರೆ ಎಳೆಯ ಕುಡಿಎಲೆಗಳ ರಸ ಹೀರಿ ಬೆಳೆಯುವುದರಿಂದ ಸುಳಿ ಹಾಗೂ ಕೆಳಗಿನ ೪ ರಿಂದ ೫ ಎಲೆಗಳವರೆಗೆ ಇದರ ಹಾವಳಿ ಹೆಚ್ಚಾಗಿ ಕಂಡುಬಂದು, ಬೆಳವಣೆಗೆ ಕುಂಟಿತವಾಗುತ್ತದೆ, ಪ್ರಮುಖವಾಗಿ ಎಲೆಯ ಅಂಗಾಂಶಗಳನ್ನು ಕೊರೆದು ರಸ ಹೀರಿ ಆ ಭಾಗದ ಜೀವಕೋಶವನ್ನು ಸಾಯಿಸುವುದರಿಂದ ಹಾನಿಗೀಡದ ಸ್ಥಳದಲ್ಲಿ ಹಳದಿ ಚಿಹ್ನೆಗಳು ಕಂಡುಬರುತ್ತವೆ ಎಂದರು.
ಮೈಟ್ಸ್‌ನುಸಿಗೆ ಪರಿಹಾರ
ಈ ಮೈಟ್ಸ್‌ನುಸಿ ಪೀಡೆಯ ನಿಯಂತ್ರಣಕ್ಕಾಗಿ ರೇಷ್ಮೆ ಬೆಳೆಗಾರರು ಸಾಮೂಹಿಕವಾಗಿ ತೋಟ ಕಟಾವಾದ ೮-೧೦ ದಿನದಲ್ಲಿ ರೋಗರ್(೩ಎಂ.ಎಲ್ ಪ್ರತಿ ಲೀಟರ್ ನೀರಿಗೆ) ಕೀಟನಾಕಶವನ್ನು ಸಿಂಪಡಿಸುವುದು. ಮೊದಲ ಸಿಂಪರಣೆ ಮಾಡಿದ ೧೦ ದಿನದ ನಂತರ ಓಮೈಟ್ ಅಥವ ಮ್ಯಾಜಿಸ್ಟರ್ (೧.೫೦ ಎಂ.ಎಲ್ ಪ್ರತಿ ಲೀಟರ್ ನೀರಿಗೆ) ಅಥವ ಕುನೋಚಿ (೦.೫೦ ಎಂ.ಎಲ್ ಪ್ರತಿ ಲೀಟರ್ ನೀರಿಗೆ) ನುಸಿ ನಾಶಕವನ್ನು ಎಲೆಯ ಕೆಳಭಾಗ ಚನ್ನಾಗಿ ನೆನೆಯುವಂತೆ ಸಿಂಪಡಿಸುವುದು ಇದಾದ ಒಂದು ವಾರದ ನಂತರ ಬಹುಪೋಷಕಾಂಶಯುಕ್ತ ದ್ರಾವಣವಾದ ಸಿರಿಬೂಸ್ಟ್ ಪೋಷಣ್ ( ೧ ಲೀಟರ್ ೧೪೦ ಲೀಟರ್ ನೀರಿಗೆ) ಬೆರೆಸಿ ಹಿಪ್ಪುನೇರಳೆ ತೋಟಕ್ಕೆ ಸಿಂಪಡಿಸುವುದರಿಂದ ಸೊಪ್ಪಿನ ಗುಟಮಟ್ಟವನ್ನು ಕಾಪಾಡಬಹುದು ಎಂದರು.
೪೦ ದಿನಗಳ ನಂತರ ಹಿಪ್ಪುನೇರಳೆ ತೋಟದಲ್ಲಿ ಮೈಟ್ಸ್‌ನುಸಿಯ ಹಾವಳಿ ಇನ್ನು ಇದ್ದಲ್ಲಿ ವೆಟ್ಟಬಲ್ ಸಲ್ಪರ್ (೩ ಗ್ರಾಂ ಪ್ರತಿ ಲೀಟರ್ ನೀರಿಗೆ) ದ್ರಾವಣ ಸಿದ್ದಪಡಿಸಿ ಹಿಪ್ಪುನೇರಳೆ ತೋಟಕ್ಕೆ ಸಿಂಪಡಿಸುವುದು. ಯಾವುದೇ ನುಸಿ ನಾಶಕ ಸಿಂಪಡಿಸಿದ ೨೦ ದಿನಗಳ ನಂತರ ಹಿಪ್ಪುನೇರಳೆ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ನೀಡುವುದು. ರೇಷ್ಮೆ ಬೆಳೆಗಾರರು ತುಂತುರು ಹನಿನೀರಾವರಿ ಅಥವ ಲೇಸರ್ ಇರಿಗೇಶನ್ ಸೌಲಭ್ಯವಿದ್ದಲ್ಲಿ ಹಿಪ್ಪುನೇರಳೆ ತೋಟಕ್ಕೆ ಬಳಸುವ ಮುಖಾಂತರ ಮೈಟ್ಸ್ ನುಸಿ ಪೀಡೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದೆಂದು ರೈತರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರೇಷ್ಮೆ ವಿಸ್ತರಣಾಧಿಕಾರಿ ಎನ್ ಚಂದ್ರಶೇಖರಗೌಡ ಹಾಗೂ ರೇಷ್ಮೆ ನಿರೀಕ್ಷಕರಾದ ಸಿ.ಜಿ.ಪಾಟೀಲ್ ರವರು ಭಾಗವಹಿ ರೇಷ್ಮೆ ಬೆಳೆಗಾರರಿಗೆ ಅರಿವು ಮೂಡಿಸಿದರು. ಸದರಿ ಗುಂಪು ಚೆರ್ಚೆಯಲ್ಲಿ ಬೀಚಗೊಂಡಹಳ್ಳಿ ಮತ್ತು ಅಮ್ಮನಲ್ಲೂರು ಗ್ರಾಮದ ರೇಷ್ಮೆ ಬೆಳೆಗಾರರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.