ರೇಷನ್ ಗೆ ಸರ್ವರ ಸಮಸ್ಯೆ : ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರದಾರರ ಪರದಾಟ

ಅಥಣಿ :ಜೂ.26: ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆಯಿಂದ ಕೆಲವು ಫಲಾನುಭವಿಗಳು ಹೆಬ್ಬೆಟ್ಟು ಗುರುತು ನೀಡಿ ಪಡಿತರ ಅಕ್ಕಿ ಪಡೆಯುತ್ತಿದ್ದಂತೆ ಬಯೋಮೆಟ್ರಿಕ್‍ನಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಥಣಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ಕಳೆದ 4 -5 ತಿಂಗಳಿಂದ ಇದೇ ಅವ್ಯವಸ್ಥೆ ಮುಂದುವರೆದಿವುದರಿಂದ ಬಹುತೇಕ ಬಡ ಹಾಗೂ ಮಧ್ಯಮ ಕುಟುಂಬದ ಕೂಲಿ ಕಾರ್ಮಿಕರು ಪ್ರತಿ ತಿಂಗಳು ರೇಷನ್ ಪಡೆಯುವುದಕ್ಕಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹಿಂದಿನ ಬಿಜೆಪಿ ಸರ್ಕಾರ ಬಡವರಿಗೆ ಸರ್ಕಾರದಿಂದ ಉಚಿತವಾಗಿ ಕೊಡುವ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗಬಾರದು, ಶ್ರೀಮಂತರ ಪಾಲಾಗಿ ಅನ್ಯ ರಾಜ್ಯಗಳಿಗೆ ಮಾರಾಟವಾಗಬಾರದು ಎಂಬ ಸದುದ್ದೇಶದಿಂದ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೆ ತಂದಿದ್ದು, ಹೊಸ ತಂತ್ರಾಂಶವನ್ನು ಅಳವಡಿಸುವ ಮೂಲಕ ಬಯೋಮೆಟ್ರಿಕ್ ಇಲ್ಲದೆ ರೇಷನ್ ಪಡೆದುಕೊಳ್ಳಲು ಅವಕಾಶವಿಲ್ಲದಂತೆ ಯೋಜನೆಯ ರೂಪಿಸಲಾಗಿದೆ. ಆದರೆ ಆಹಾರ ಇಲಾಖೆಯ ಎಡವಟ್ಟಿನಿಂದ ಮೇಲಿಂದ ಮೇಲೆ ಸರ್ವ ಸಮಸ್ಯೆಯ ನೆಪ ಹೇಳುವ ಮೂಲಕ ಅನ್ನಭಾಗ್ಯ ಯೋಜನೆಯ ವಿಫಲಗೊಳಿಸುತ್ತಿದ್ದಾರೆ ಎನ್ನುವ ಆರೋಪಗಳು ಅಧಿಕವಾಗಿವೆ.
ರಾಜ್ಯದಲ್ಲಿ ಈಗ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಸ್ತುತ ಬಡವರಿಗೆ ಅನ್ನ ಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿ ಮೂಲಕ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ.ಯಂತೆ ವಿತರಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಕುಟುಂಬದ 11 ವರ್ಷದ ಮೇಲ್ಪಟ್ಟ ಸದಸ್ಯರೊಬ್ಬರು ಅಥವಾ ಯಜಮಾನ ಬಯೋಮೆಟ್ರಿಕ್ ಯಂತ್ರದಲ್ಲಿ ಹೆಬ್ಬೆಟ್ಟು ಗುರುತು ನೀಡಿದರೆ ಅಲ್ಲಿ ಎಲ್ಲಾ ವಿವರ ತೋರಿಸುತ್ತದೆ. ಎಲ್ಲಾ ದಾಖಲೆ ಪರಿಶೀಲನೆ ಮಾಡಿದ ನಂತರ ನ್ಯಾಯ ಬೆಲೆ ಅಂಗಡಿಯವರು ಪ್ರತಿ ಸದಸ್ಯರಿಗೆ 6 ಕೆ.ಜಿ.ಯಂತೆ ಆ ಕುಟುಂಬದ ಎಲ್ಲಾ ಸದಸ್ಯರ ಅಕ್ಕಿಯನ್ನು ಹೆಬ್ಬೆಟ್ಟು ನೀಡಿದವರಿಗೆ ನೀಡಬೇಕು. ಆದರೆ, ಬಯೋಮೆಟ್ರಿಕ್‍ನಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ಅಕ್ಕಿ ತೆಗೆದುಕೊಳ್ಳಲು ದೂರದ ತೋಟದ ವಸ್ತಿಗಳಿಂದ ಹಾಗೂ ಗ್ರಾಮೀಣ ಭಾಗದಿಂದ ಬಂದಿದ್ದ ಜನರು ಕಾಯುತ್ತಾ ಕೂರಬೇಕಾಗುತ್ತದೆ.ಕೆಲವು ಬಾರಿ ಬೆಳಗ್ಗೆಯಿಂದ ಸಂಜೆಯವರೆಗೆ ಕಾದರೂ ಸರ್ವರ್ ಬರುವುದೇ ಇಲ್ಲ. ಮತ್ತೆ ಮಾರನೇ ದಿನ ಕೆಲಸ ಬಿಟ್ಟು ಕಾಯುತ್ತಾ ಕೂರುವ ಪರಿಸ್ಥಿತಿ ಬಂದಿದೆ. ಕೆಲವು ನ್ಯಾಯ ಬೆಲೆ ಅಂಗಡಿಗಳಲ್ಲಿ ಸರ್ವರ್ ಜತೆಗೆ ಇಂಟರ್ ನೆಟ್ ಸಹ ಇರದೆ ಪಡಿತರ ನೀಡಲು ತೊಂದರೆಯಾಗುತ್ತಿದೆ. ಇದರ ಜತೆಗೆ ಕೆಲವು ಗ್ರಾಮೀಣ ಪ್ರದೇಶದ ಜನರು ದಿನವಿಡಿ ಕೂಲಿ ನಾಲಿ ಕೆಲಸ ಮಾಡಿ ಹೆಬ್ಬೆಟ್ಟು ನೀಡಿದರೆ ಸ್ಪಷ್ಟವಾಗಿ ಗೋಚರವಾಗುದಿಲ್ಲ. ಇದರಿಂದ ಅನೇಕ ಬಾರಿ ಪಡಿತರದಾರರಿಗೂ, ನ್ಯಾಯ ಬೆಲೆ ಅಂಗಡಿಯವರಿಗೆ ಜಗಳವಾಗುವ ಪ್ರಸಂಗಗಳು ಸಾಮಾನ್ಯ.

ಬಯೋಮೆಟ್ರಿಕ್ ಶಾಪವಾಯಿತೇ..? :
ಈ ಹಿಂದಿನ ಕಾಲದಲ್ಲಿ ನಾಯ್ಯಬೆಲೆ ಅಂಗಡಿಗಳಲ್ಲಿ
ಫಲಾನುಭವಿಗಳಿಂದ ಸಹಿ ಪಡೆದು ಅಕ್ಕಿ, ಗೋಧಿ, ಸಕ್ಕರೆ ಮುಂತಾದ ಪಡಿತರ ನೀಡಲಾಗುತ್ತಿತ್ತು. ಆದರೆ, ಇದರಿಂದ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಬಯೋಮೆಟ್ರಿಕ್ ಪದ್ಧತಿ ಜಾರಿಗೆ ತರಲಾಯಿತು. ಬಯೋಮೆಟ್ರಿಕ್ ಪದ್ಧತಿಯಿಂದ ಯಾವುದೇ ಫಲಾನುಭವಿಗಳಿಗೆ ಮೋಸವಾಗುವುದಿಲ್ಲ ಆದರೆ, ಗಡಿ ಭಾಗದ ಅನೇಕ ಹಳ್ಳಿಗಳಲ್ಲಿ, ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಇಂಟರ್‍ನೆಟ್ ವ್ಯವಸ್ಥೆ ಸರಿಯಾಗಿ ಸಿಕ್ಕುವುದಿಲ್ಲ. ಇದರಿಂದ ಸಂಬಂಧಪಟ್ಟ ಬಯೋ ಮೆಟ್ರಿಕ್ ಯಂತ್ರಗಳು ಕೆಲಸ ಮಾಡುವುದಿಲ್ಲ. ಇದರ ಜತೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಾರಿಗೆ ತಂದ ಈ ಸಾಫ್ಟವೇರ್(ಎನ್‍ಐಸಿ) ಪದೇ, ಪದೆ ಸರ್ವರ್ ಸಮಸ್ಯೆ ತೋರಿಸುತ್ತಿದೆ. 5-6 ತಿಂಗಳು ಕಳೆದರೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುತ್ತಿಲ್ಲ.
ಹಿಂದೆ ತಿಂಗಳ 1ನೇ ತಾರೀಖಿನಿಂದಲೇ ನ್ಯಾಯಬೆಲೆ ಅಂಗಡಿಗಳಿಗೆ ಅಧಿಕಾರಿಗಳು ಅಕ್ಕಿ ಸರಬರಾಜು ಮಾಡುತ್ತಿದ್ದರು. ಅಂದಿನಿಂದಲೇ ವಿತರಣೆ ನಡೆಯುತ್ತಿತ್ತು. ಆದರೆ, ಈಗ ಪ್ರತಿ ತಿಂಗಳು 11ರ ಬಳಿಕವೇ ಪಡಿತರ ವಿತರಣೆ ಮಾಡಬೇಕು. ಪಡಿತರ ಚೀಟಿದಾರರು 27ರ ಒಳಗಾಗಿ ರೇಷನ್ ಪಡೆದುಕೊಳ್ಳಬೇಕು ಎಂಬ ಸರ್ಕಾರದ ಸೂಚನೆ ಮತ್ತೊಂದು ಸಮಸ್ಯೆಗೆ ಕಾರಣವಾಗಿದೆ.
ಸರ್ವರ್ ಸಮಸ್ಯೆಯಿಂದ ಪಡಿತರದಾರರು ಬಯೋಮೆಟ್ರಿಕ್ ಮಾಡದೆ ಹಾಗೆ ಬಿಟ್ಟರೆ, ಫಲಾನುಭವಿ ರೇಷನ್ ಪಡೆದುಕೊಂಡಿಲ್ಲ ಎಂಬ ಕಾರಣಕ್ಕೆ ರೇಷನ್ ಕಾರ್ಡ್ ರದ್ದಾಗುತ್ತದೆ ಎಂಬ ಆತಂಕ ಫಲಾನುಭವಿಗಳಲ್ಲಿ ಮನೆ ಮಾಡಿದೆ.

ಮುಂಗಾರು ಮಳೆಯಾಗದೆ ಕುಡಿಯುವ ನೀರು, ದನ ಕರುಗಳಿಗೆ ಮೇವು ಇಲ್ಲದೆ ತೊಂದರೆ ಅನುಭವಿಸುತ್ತೇವೆ. ಕೂಲಿ ಕೆಲಸ ಮಾಡಿ ಬದುಕು ಸಾಗಿಸಬೇಕಾಗಿದೆ. ರೇಷನ್ ಅಕ್ಕಿ ಒಯ್ಯಲು ನ್ಯಾಯಬೆಲೆ ಅಂಗಡಿಗೆ ಬಂದರೆ ಸರ್ವರ ಸಮಸ್ಯೆ ಎನ್ನುತ್ತಾರೆ, ದಿನವಿಡೀ ರೇಷನ್ ಅಂಗಡಿಯ ಮುಂದೆ ಕಾಯುವ ಪರಿಸ್ಥಿತಿ ನಮ್ಮದಾಗಿದೆ. ಈ ಮೊದಲು ಕೊರೊನಾ ಸಂದರ್ಭದಲ್ಲಿ ರೆಜಿಸ್ಟರ್ ಬುಕ್ ನಲ್ಲಿ ರೇಷನ್ ಕಾರ್ಡ್ ಸಂಖ್ಯೆ ಬರೆದುಕೊಂಡು ಅಕ್ಕಿ ನೀಡಿದಂತೆ ಈ ಬರಗಾಲ ಸಮಯದಲ್ಲಿಯೂ ಕೊಡಬೇಕು. ಮುಖ್ಯಮಂತ್ರಿಗಳಿಗೆ ನಾವು ಮನವಿ ಪತ್ರ ಬರೆದುಕೊಡುತ್ತೇವೆ. ಈಗ ನಮಗೆ ರೇಷನ್ ಅಕ್ಕಿ ಕೊಡಿ ಎಂದು ನ್ಯಾಯಬೆಲೆ ಅಂಗಡಿಕಾರರನ್ನು ಪಡಿತರ ಫಲಾನುಭವಿಗಳು ಒತ್ತಾಯಿಸುತ್ತಿದ್ದಾರೆ.


ಸರ್ವರ್ ಸಮಸ್ಯೆ ತಾಲೂಕಿನಲ್ಲಿ ಅಷ್ಟೇ ಅಲ್ಲ, ಇದು ರಾಜ್ಯ ವ್ಯಾಪಿಯಾಗಿದೆ. ಆಹಾರ ಇಲಾಖೆಯ ಸರ್ವರ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಬೆಂಗಳೂರಿನಲ್ಲಿ ಸೂಕ್ತ ನಿರ್ವಹಣೆ ಮಾಡುವ ನಿಟ್ಟಿನಲ್ಲಿ 3-4 ದಿನಗಳಿಂದ ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರು, ಬೆಳಗಾವಿ ಮತ್ತು ಕಲಬುರ್ಗಿ ಮೂರು ವಿಭಾಗಗಳಲ್ಲಿ ಪ್ರತ್ಯೇಕವಾದ ಸರ್ವರ್ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಮೇಲಾಧಿಕಾರಿಗಳ ಜೊತೆ ಮಾತನಾಡಿ ಶೀಘ್ರದಲ್ಲಿಯೇ ಸರ್ವರ್ ಸಮಸ್ಯೆ ಸರಿಪಡಿಸಲಾಗುವುದು.

  • ಬಿ.ಎಸ್.ಕಡಕಬಾವಿ, ತಹಸೀಲ್ದಾರ ಅಥಣಿ.