ರೇವ್ ಪಾರ್ಟಿ ಮೇಲೆ ದಾಳಿ 25 ಮಂದಿ ಸೆರೆ

ತಿರುವನಂತಪುರಂ(ಕೇರಳ),ಡಿ.೬- ಇಲ್ಲಿಗೆ ಸಮೀಪದ ಪೂವರ್ ಎಂಬಲ್ಲಿನ ರೆಸಾರ್ಟ್‌ನಲ್ಲಿ ರಾತ್ರಿಯಿಂದ ಬೆಳಗ್ಗಿನವರೆಗೂ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬೆಂಗಳೂರಿನವರು ಸೇರಿ ೨೫ಮಂದಿಯನ್ನು ಬಂಧಿಸಿದ್ದಾರೆ.
ರೇವ್ ಪಾರ್ಟಿಯಲ್ಲಿ ಸುಮಾರು ೬೫ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ನಿಷೇಧಿತ ಮಾದಕ ವಸ್ತುಗಳಾದ ಹಶಿಶ್, ಎಂಡಿಎಂಎ ಸೇರಿದಂತೆ ಇತರೆ ಅಮಲು ಪದಾರ್ಥಗಳನ್ನು ಬಳಸುತ್ತಿದ್ದರು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಮಹಿಳೆಯರೂ ಸೇರಿದಂತೆ ಇಪ್ಪತ್ತೈದು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ರೇವ್ ಪಾರ್ಟಿಯಲ್ಲಿ ಕೇರಳ ಮತ್ತು ಬೆಂಗಳೂರು ಸೇರಿದಂತೆ ಹೊರ ರಾಜ್ಯದ ಅನೇಕರು ಭಾಗವಹಿಸಿದ್ದರು.
ಈ ಪಾರ್ಟಿ ಹಿಂದೆ ದಂಧೆಕೋರರ ಕೈವಾಡವಿದ್ದು, ಸ್ಥಳದಲ್ಲಿ ಬಂಧಿಸಲ್ಪಟ್ಟವರಲ್ಲಿ ಕೆಲವರು ಭಾಗಿಯಾಗಿರುವ ಶಂಕೆಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.