ರೇವ್ ಪಾರ್ಟಿಗೆ ಡ್ರಗ್ಸ್ ಪೂರೈಕೆ ಡಿಜೆ ಹಳ್ಳಿಯ ಪೆಡ್ಲರ್ ಸೆರೆ

ಬೆಂಗಳೂರು,ಜೂನ್.೩-ನಗರದ ಹೊರವಲಯದ ಹೆಬ್ಬಗೋಡಿಯ ಜಿಆರ್ ಫಾರ್ಮ್ ಹೌಸ್ ರೇವ್ ಪಾರ್ಟಿಗೆ ಡ್ರಗ್ಸ್ ಸರಬರಾಜು ಮಾಡಿದ್ದ ಪೆಡ್ಲರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡಿಜೆ ಹಳ್ಳಿಯ ಇಮಾರ್ ಶರೀಫ್ ಬಂಧಿತ ಆರೋಪಿಯಾಗಿದ್ದಾನೆ, ಆರೋಪಿಗೆ ಹೈಟೆಕ್ ರೇವ್ ಪಾರ್ಟಿಗೆ ಡ್ರಗ್ಸ್ ಜೊತೆ ಆಗಮಿಸುವಂತೆ ತಿಳಿಸಲಾಗಿದ್ದು, ಅದರಂತೆ ವಿವಿಧ ಮಾದರಿಯ ಡ್ರಗ್ಸ್ ತೆಗೆದುಕೊಂಡು ಬಂದು ಪಾರ್ಟಿಗೆ ಪೂರೈಸಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ರೇವ್ ಪಾರ್ಟಿಯಲ್ಲಿ ಆಯೋಜಕರ ಮೂಲಕ ಡ್ರಗ್ಸ್ ನೀಡಲಾಗಿದ್ದು, ತನಿಖೆಯಲ್ಲಿ ಪತ್ತೆಯಾದ ಮಾಹಿತಿಯನ್ನು ಆಧರಿಸಿ ಆರೋಪಿ ಶರೀಫ್ ನನ್ನು ೪೦ ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ.
ಈ ನಡುವೆ ಆರೋಪಿಯು ವಿಚಾರಣೆ ವೇಳೆ ನೀಡಿದ ಮಾಹಿತಿಯಿಂದ ನೋಟಿಸ್‌ಗೆ ಹಾಜರಾಗದವರಿಗೆ ಸಂಕಷ್ಟ ಎದುರಾಗಲಿದೆ. ಪಾರ್ಟಿಯಲ್ಲಿ ಹಾಜರಾಗಿ ಡ್ರಗ್ಸ್ ಸೇವನೆ ಹಿನ್ನಲೆಯಲ್ಲಿ ತೆಲುಗು ನಟಿ ಹೇಮಾ, ಆಶಿ ರಾಯ್ ಸೇರಿ ಇದುವರೆಗೆ ಇಪತ್ತಕ್ಕೂ ಹೆಚ್ಚು ಮಂದಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಯಾರು ಕೂಡ ಇದುವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಸಿಸಿಬಿ ನ್ಯಾಯಾಲಯದ ಮೋರೆ ಹೋಗಲಿದೆ. ವಿಚಾರಣೆಗೆ ಹಾಜರಾಗದ ವ್ಯಕ್ತಿಗಳ ವಿರುದ್ದ ಅರೆಸ್ಟ್ ವಾರಂಟ್ ಪಡೆದು ಬಂಧಿಸಲು ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ
೫೦ ಲಕ್ಷ ಖರ್ಚು:
ರೇವ್ ಪಾರ್ಟಿಗೆ ೫೦ ಲಕ್ಷಕ್ಕೂ ಹಣ ಖರ್ಚು ಮಾಡಲಾಗಿತ್ತು, ಹೈದರಾಬಾದ್‌ನ ವಾಸು ಬರ್ತ್‌ಡೇ ಹೆಸರಲ್ಲಿ ನಡೆದ ಪಾರ್ಟಿಯಲ್ಲಿ ೧೦೦ರಿಂದ ೧೫೦ಕ್ಕೂ ಹೆಚ್ಚು ಪುರುಷ ಮತ್ತು ಮಹಿಳೆಯರು ಭಾಗಿಯಾಗಿದ್ದರು ಎಂದು ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ. ಇನ್ನು ಪಾರ್ಟಿಯಲ್ಲಿಯೇ ಡ್ರಗ್ಸ್ ಮರಾಟ ಮಾಡಿದ್ದ ಸಿದ್ದಿಕ್, ರಣ್ ದೀರ್, ರಾಜ್ ಭಾವನನ್ನು ಬಂಧಿಸಲಾಗಿದೆ.
ದಾಳಿ ವೇಳೆ ಪತ್ತೆಯಾದವರ ಬಿಟ್ಟು ಉಳಿದವರ ಮಾಹಿತಿ ಸಂಗ್ರಹಕ್ಕೆ ಸಿಸಿಬಿ ಮುಂದಾಗಿದೆ. ಪಾರ್ಟಿಯಲ್ಲಿ ಎಂಡಿಎಂಎ, ಕೊಕೇನ್, ಗಾಂಜಾ, ಹೈಡ್ರೋ ಗಾಂಜಾ, ಎಂ, ಎಕ್ಸ್ಟೆಸಿ ಪಿಲ್ಸ್, ಚಸರ್ ಹೀಗೆ ಹಲವಾರು ಮಾದರಿಯ ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾಗಿದೆ. ಎಲ್ಲಾ ಮಾದರಿಯ ಡ್ರಗ್ಸ್ ಅನ್ನು ಹೇಗೆ ಪಾರ್ಟಿಗೆ ತಂದಿದ್ದರು ಎಂಬ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ.