ರೇವೂರ(ಬಿ) ಪೊಲೀಸ್ ಠಾಣೆಯ ಸಿಬ್ಬಂದಿಗಳ ಭರ್ಜರಿ ಕಾರ್ಯಾಚರಣೆ9 ಲಕ್ಷ 10 ಸಾವಿರ ರೂ. ಮೌಲ್ಯದ 14 ದ್ವಿ ಚಕ್ರ ವಾಹನಗಳು ವಶಕ್ಕೆ

ಅಫಜಲಪುರ:ಜೂ.16 ಕಲಬುರಗಿ ಜಿಲ್ಲೆ, ವಿಜಯಪುರ ಜಿಲ್ಲೆ ಹಾಗೂ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಕಳ್ಳತನ ಮಾಡಿದ ಒಟ್ಟು 14 ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆದ ರೇವೂರ(ಬಿ) ಪೊಲೀಸ್ ಠಾಣೆಯ ಪೊಲೀಸರು ಕಳ್ಳತನ ಮಾಡಿದ ಅಂತರ್ ರಾಜ್ಯ ಕಳ್ಳರ ಹುಡುಕಾಟಕ್ಕೆ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು 9 ಲಕ್ಷ 10 ಸಾವಿರ ರೂ. ಮೌಲ್ಯದ 14 ಮೋಟಾರ್ ಸೈಕಲ್‍ಗಳನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಗಳಾದ ಮಹಾಂತೇಶ ಗಂಡೊಳ, ದಾವುದ ಮುಜಾವರ, ಸುಲೇಮಾನ ಹೊಸಮನಿ, ಶಿವಾ ದೊಡ್ಡಮನಿ, ಸುಬಾನ ಖುರೇಷಿ, ಸುನೀಲ ಮ್ಯಾಕೇರಿ, ಸದ್ದಾಂ ಖುರೇಷಿ ಎಂಬ 7 ಜನ ಆರೋಪಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು ತಲೆಮರೆಸಿಕೊಂಡ ಇನ್ನೋರ್ವ ಆರೋಪಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅಫಜಲಪುರ ಸಿ.ಪಿ.ಐ ರಾಜಶೇಖರ ಬಡದೇಸಾರ ನೇತೃತ್ವದಲ್ಲಿ ಪಿ.ಎಸ್.ಐ ಗಳಾದ ಗಂಗಮ್ಮ ಹಾಗೂ ಶ್ರೀದೇವಿ ಅವರನ್ನೊಳಗೊಂಡ ತಂಡದಲ್ಲಿ ಮಲ್ಲಣ್ಣ, ಬೀರಣ್ಣ, ವಿಠ್ಠಲ, ಮಲ್ಲಪ್ಪ, ಶಿವಯ್ಯಾ, ತುಳಜಪ್ಪ, ಭೀಮಾಶಂಕರ, ಯಲ್ಲಪ್ಪ, ಮಲ್ಲಿನಾಥ, ಅಂಬರೀಷ, ಆನಂದ ಸೇರಿದಂತೆ ಮೊದಲಾದ ಸಿಬ್ಬಂದಿಗಳಿಂದ ಕೂಡಿದ ತನಿಖಾ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಬ್ಬಂದಿಗಳ ಕಾರ್ಯಾಚರಣೆಗೆ ಕಲಬುರಗಿ ಎಸ್.ಪಿ ಇಶಾ ಪಂತ್, ಹೆಚ್ಚುವರಿ ಎಸ್.ಪಿ ಎನ್. ಶ್ರೀನಿಧಿ, ಡಿ.ವೈ.ಎಸ್ಪಿ ಗೋಪಿ ಬಿ. ಆರ್ ಅವರು ಶ್ಲಾಘಿಸಿದ್ದಾರೆ. ಸದರಿ ಆರೋಪಿತರಿಂದ ದ್ವಿ ಚಕ್ರ ವಾಹನ ಕಳೆದುಕೊಂಡ ಸಾರ್ವಜನಿಕರು ಪೊಲೀಸರ ಕಾರ್ಯಕ್ಕೆ ಸಂತಸ ವ್ಯಕ್ತಪಡಿದ್ದಾರೆ.


ಈ ವೇಳೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಎಸ್.ಪಿ ಇಶಾ ಪಂತ್ ಅವರು ಅಫಜಲಪುರ ತಾಲೂಕಿನಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಈಗಾಗಲೇ ನಮ್ಮ ಸಿಬ್ಬಂದಿಗಳಿಂದ ಕಟ್ಟುನಿಟ್ಟನ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಕಳ್ಳತನ ಪ್ರಕರಣ ಸೇರಿದಂತೆ ಮುಂತಾದ ಅನಧೀಕೃತ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲು ಅಫಜಲಪುರ ಪಟ್ಟಣದಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಲು ಸಂಬಂಧಪಟ್ಟ ಪುರಸಭೆಯ ಅಧಿಕಾರಿಗಳೊಂದಿಗೆ ಚರ್ಚಿಸಲು ನಮ್ಮ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾತ್ರಿ ವೇಳೆ ಹೋಟೆಲ್ ಮತ್ತು ಧಾಬಾಗಳ ಮಾಲೀಕರು ನಿಗದಿತ ಸಮಯದ ಒಳಗಡೆ ಬಂದ್ ಮಾಡಬೇಕು. ಅಕ್ರಮ ಸಾರಾಯಿ ಮದ್ಯ ಮಾರಾಟ ಹಾಗೂ ಅಕ್ರಮ ಮರಳುಗಾರಿಕೆ ಕಂಡು ಬಂದರೆ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ ಅವರು ಸಾರ್ವಜನಿಕರು ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಲು ತಿಳಿಸಿದ್ದಾರೆ.