ರೇವಾ ವಿವಿ ವಿದ್ಯಾರ್ಥಿಗಳಿಂದ ’ಸಿಂಗಲ್ ಫೇಸ್ ಪ್ರಿವೆಂಟರ್’ ಸಂಶೋಧನೆ

ಬೆಂಗಳೂರು,ಏ.೪- ವಿದ್ಯುತ್ ಸಮಸ್ಯೆಯಿಂದ ಮೋಟಾರ್ ಗಳು ಕೆಟ್ಟುಹೋಗುವ ಹಾಗೂ ಅದರಿಂದ ಆಗುವ ನಷ್ಟವನ್ನು ತಪ್ಪಿಸಿ,
ರೈತಾಪಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೇವಾ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು “ಸಿಂಗಲ್ ಫೇಸ್ ಪ್ರಿವೆಂಟರ್” ಸಂಶೋಧನೆ ಮಾಡಿದ್ದಾರೆ.

ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರೇವಾ ಇಂಪ್ರಿಂಟ್ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ. ಪಿ. ಶ್ಯಾಮರಾಜು ಸಿಂಗಲ್ ಫೇಸ್ ಪ್ರಿವೆಂಟರ್ ಯಂತ್ರ ಹಾಗೂ ೩ಫೇಸ್ ಸೆನ್ಸಾರ್ ವೀಲ್ ಚೇರ್ ವೀಕ್ಷಿಸಿ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.

ನಂತರ ಮಾತನಾಡಿದ ಅವರು, ನಮ್ಮ ವಿಶ್ವವಿದ್ಯಾಲಯದ ಇಇಇ ವಿಭಾಗದ ವಿದ್ಯಾರ್ಥಿಗಳು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಏನೆಲ್ಲ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ವಿದ್ಯಾರ್ಥಿಗಳು ಸಂಶೋಧನೆ ನಡೆಸಿ, ಹೊಸದನ್ನು ಕಂಡುಹಿಡಿದರೆ ಅದರಿಂದ ಸಮಾಜಕ್ಕೆ ಆಗುವ ಉಪಯೋಗವನ್ನು ಗುರುತಿಸುವಂತಾಗಬೇಕು ಎಂದರು.

ವಿದ್ಯುತ್ ಸಮಸ್ಯೆಯಿಂದ ಮೋಟಾರ್ ಗಳು ಕೆಟ್ಟುಹೋಗುವ ಹಾಗೂ ಅದರಿಂದ ಆಗುವ ನಷ್ಟವನ್ನು ತಪ್ಪಿಸಲು ಕಂಡುಹಿಡಿದಿರುವ ಸಾಧನ ಅತ್ಯುತ್ತಮವಾಗಿದೆ. ಹಳ್ಳಿಗಾಡಿನ ರೈತರ ದೃಷ್ಟಿಕೋನದಲ್ಲಿ ಅನ್ವೇಷಣೆ ಮಾಡುತ್ತಿರುವುದು ನಮ್ಮ ರೇವಾ ವಿದ್ಯಾರ್ಥಿಗಳಿಗಿರುವ ಸಾಮಾಜಿಕ ಕಾಳಜಿ ತೋರಿಸುತ್ತಿದೆ ಎಂದು ಹೇಳಿದರು.

೩ಫೇಸ್ ಸೆನ್ಸಾರ್ ವೀಲ್ ಚೇರ್: ಈ ವೀಲ್ ಚೇರ್ ಪ್ರಾಜೆಕ್ಟ್ ಇನ್ನು ನಾಲ್ಕೈದು ತಿಂಗಳಲ್ಲಿ ಸಂಪೂರ್ಣವಾಗಲಿದೆ. ಈಗಾಗಲೇ ವಿಕಲಾಂಗರನ್ನು ಕರೆದುಕೊಂಡು ಬರುವುದಕ್ಕೆ ನಮ್ಮಲ್ಲಿ ವೀಲ್ ಚೇರ್‍ಗಳಿವೆ. ಆದರೆ, ನಮ್ಮ ವಿದ್ಯಾರ್ಥಿಗಳು ವಿಶೇಷವಾದ ಮೂರು ಹಂತಗಳಲ್ಲಿ (ಸೆನ್ಸಾರ್) ಅದು ಕಾರ್ಯ ನಿರ್ವಹಿಸುತ್ತದೆ. ಬ್ಯಾಟರಿ ಚಾಲಿತ ವೀಲ್ ಚೇರ್ ಇದಾಗಿದ್ದು, ವಿಕಲಾಂಗ ವ್ಯಕ್ತಿಗಳು ಈ ವೀಲ್ ಚೇರ್ ಬಳಸಿ, ಕೇವಲ ತಲೆಯಿಂದ ಅಲುಗಾಡಿಸುವ ಸಂಜ್ಞೆಗಳನ್ನು ನೀಡುವ ಮೂಲಕ ಅಥವಾ ಮೊಬೈಲ್ ನಿಯಂತ್ರಣ, ಕೀ ಕಂಟ್ರೋಲ್‌ನಿಂದ ಚಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರೇವಾ ವಿಶ್ವವಿದ್ಯಾಲಯದ ಉಪಕುಲಪತಿ ಎಂ. ಧನಂಜಯ, ಇಇಇ ವಿಭಾಗದ ನಿರ್ದೇಶಕ ಮತ್ತು ಪ್ರಾಧ್ಯಾಪಕ ಡಾ. ರಾಜಶೇಖರ ಮಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರೇವಾ ವಿಶ್ವವಿದ್ಯಾಲಯದ ಇಇಇ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ ಆವಿಷ್ಕಾರ ಪ್ರಸ್ತುತ ಪಡಿಸುವ “ರೇವಾ ಇಂಪ್ರಿಂಟ್” ಕಾರ್ಯಕ್ರಮದಲ್ಲಿ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಜತೆ ಕುಲಾಧಿಪತಿ ಡಾ. ಪಿ. ಶ್ಯಾಮರಾಜು ಹಾಗೂ ರೇವಾ ವಿವಿ ನಿರ್ದೇಶಕ ಮಂಡಳಿ ಹಾಗೂ ಅಧ್ಯಾಪಕರ ತಂಡ.