ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ರಾಜಕೀಯ ಮಾಡಲು ಬರಬೇಡಿ

ಕಾಳಗಿ.ಮೇ.30: ತಾಲೂಕಿನ ರೇವಗ್ಗಿ(ರಟಕಲ್) ಧಾರ್ಮಿಕ ದತ್ತಿ ಇಲಾಖೆಯ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ರಾಜಕೀಯ ಮಾಡಲು ಬರಬೇಡಿ ಇದರಿಂದ ಭಕ್ತರ ಮನಸ್ಸಿಗೆ ನೋವುಂಟಾಗುತ್ತಿದೆ ಎಂದು ದೇವಸ್ಥಾನ ಸಮಿತಿ ಸದಸ್ಯರಾದ ಸಿದ್ದಯ್ಯ ಮಠಪತಿ, ತಿಪ್ಪಣ್ಣ ಚೌಳಿಕಾರ, ಶಾಂತಪ್ಪ ನಾಗೂರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರಾಮಚಂದ್ರ ಜಾಧವ ಅವರು ಯಾವುದೇ ಅಧಿಕಾರ ದುರುಪಯೋಗ ಮಾಡಿಕೊಂಡು ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿಲ್ಲ, ಸಮಿತಿಯ ಸರ್ವ ಸದಸ್ಯರು ಹಾಗೂ ಭಕ್ತರ ಅಭಿಪ್ರಾಯದ ಮೇರೆಗೆ ದೇವಸ್ಥಾನ ಅಭಿವೃದ್ಧಿ ದೃಷ್ಟಿಯಿಂದ ಸಹಾಯಕ ಆಯುಕ್ತರ ಸಮ್ಮುಖದಲ್ಲಿ ರಾಮಚಂದ್ರ ಜಾಧವ ಅವರನ್ನು ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಿದ್ದೆವೆ ಎಂದು ಹೇಳಿದರು.
ರೇವಣಸಿದ್ದೇಶ್ವರ ದೇವಸ್ಥಾನ ಜೀಣೋದ್ಧಾರಕ್ಕಾಗಿ ಜಾಧವ ಪರಿವಾರ ಕೊಡುಗೆ ಅಪಾರವಾಗಿದ್ದು ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಚಂದ್ರ ಜಾಧವ ಅವರ ತಂದೆ ದಿ. ಗೋಪಾಲದೇವ ಜಾಧವ ಅವರು ರೇವಣಸಿದ್ದೆಶ್ವರ ಭಕ್ತರಾಗಿದ್ದು, ಮನೆ ದೇವರಾದ ರೇವಣಸಿದ್ದೇಶ್ವರ ದೇವಸ್ಥಾನ ಅಭಿವೃದ್ಧಿಗಾಗಿ ಮುತುವರ್ಜಿ ವಹಿಸಿ ಧಾರ್ಮಿಕ ಇಲಾಖೆಗೆ ಸೇರಿಸುಲು ಅನೇಕ ಅಡೆತಡೆಗಳು ಬಂದರೂ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮುಜರಾಯಿ ಇಲಾಖೆಗೆ ಸೇರಲು ಪ್ರಮುಖ ಕಾರಣಿಭೂತರಾದ ಈ ಕುಟುಂಬದ ವಿರುದ್ಧ ರಾಜಕೀಯ ಬೆಳೆ ಬೆಯಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು.
ರೇವಣಸಿದ್ದೇಶ್ವರ ದೇವಸ್ಥಾನ ಒಂದೇ ಜಾತಿ ಜನಾಂಗದವರಿಗೆ ಸೀಮಿತವಾಗಿಲ್ಲ, ಸರ್ವ ಜನಾಂಗದ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ದೇವಸ್ಥಾನದ ಇತಿಹಾಸ ತಿಳಿದುಕೊಳ್ಳದೆ, ಇದರ ಗಂಧ ಗಾಳಿ ಗೊತ್ತಿಲ್ಲದೆ ರಾಜಕೀಯ ಪ್ರೇರಿತ ಹೇಳಿಕೆಯಿಂದ ಭಕ್ತರ ಮನಸ್ಸಿಗೆ ನೋವುಂಟಾಗುತ್ತಿದೆ. ಇದರಿಂದ ದೇವಸ್ಥಾನ ಅಭಿವೃದ್ಧಿಗೂ ಧಕ್ಕೆಯುಂಟಾಗುತ್ತದೆ ಕೂಡಲೇ ಕ್ಷಮೇ ಕೇಳಬೇಕು ಎಂದು ಹೇಳಿದರು.
ದೇವಸ್ಥಾನ ವಿಷಯದಲ್ಲಿ ನಮಗೆ ಜಾತಿಗಿಂತ ಅಭಿವೃದ್ಧಿ ಮುಖ್ಯವಾಗಿದೆ ರಾಮಚಂದ್ರ ಜಾಧವ ಅವರಿಗಿಂತ ಅಭಿವೃದ್ಧಿಯಲ್ಲಿ ಸೂಕ್ತ ವ್ಯಕ್ತಿ ಸಿಕ್ಕರೆ ಸಮಿತಿ ಸದಸ್ಯರೆಲ್ಲರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೆವೆ ವಿನಾಃ ಕಾರಣ ದೇವಸ್ಥಾನ ವಿಷಯದಲ್ಲಿ ರಾಜಕೀಯ ಪ್ರೇರಿತ ಹೇಳಿಕೆ ನೀಡಿ ಭಕ್ತರಲ್ಲಿ ಗೊಂದಲ ಮೂಡಿಸಬೇಡಿ ಎಂದು ಹೇಳಿದರು.ಮುಖಂಡರಾದ ಶಿವರಾಜ ಪಾಟೀಲ, ರೇವಣಸಿದ್ಧ ಚೆಂಗಟಿ, ರೇವಣಸಿದ್ಧ ಬಡಾ, ಬಸವರಾಜ ತಳವಾರ, ಸುರೆಶ ಪೆದ್ದಿ, ದಯಾಸಾಗರ ಪಾಟೀಲ, ಅಣವೀರಯ್ಯ ಸ್ವಾಮಿ ಇದ್ದರು.