ರೇಬಿಸ್‌ಗೆ ಬಾಲಕ ಬಲಿ

ಗಾಜಿಯಾಬಾದ್,ಸೆ.೬-ಒಂದು ತಿಂಗಳ ಹಿಂದೆ ನಾಯಿ ಕಚ್ಚಿದ ಘಟನೆಯ ಬಗ್ಗೆ ಪೋಷಕರಿಗೆ ತಿಳಿಸದ ೧೪ ವರ್ಷದ ಬಾಲಕ ರೇಬೀಸ್‌ನಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಾಲಕನ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಬುಲಂದ್ ಶಹರ್‌ನಿಂದ ಗಾಜಿಯಾಬಾದ್‌ಗೆ ಮರಳಿ ಕರೆತರುವಾಗ ೮ನೇ ತರಗತಿ ವಿದ್ಯಾರ್ಥಿ ಶಹವಾಜ್ ಸೋಮವಾರ ಸಂಜೆ ಸಾವನ್ನಪ್ಪಿದ್ದಾನೆ.
ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರಣ್ ಸಿಂಗ್ ಕಾಲೋನಿ ನಿವಾಸಿ ಶಹವಾಜ್ ಎಂಬಾತನಿಗೆ ಒಂದೂವರೆ ತಿಂಗಳ ಹಿಂದೆ ಪಕ್ಕದ ಮನೆಯ ನಾಯಿ ಕಚ್ಚಿದ್ದು, ಭಯದಿಂದ ಪೋಷಕರಿಗೆ ತಿಳಿಸಿದೆ ಅದನ್ನು ಮುಚ್ಚಿಟ್ಟಿದ್ದ. ಹುಡುಗನಿಗೆ ರೇಬೀಸ್ ತಗುಲಿ ಅಸಹಜವಾಗಿ ವರ್ತಿಸತೊಡಗಿದ. ಸೆಪ್ಟೆಂಬರ್ ೧ ರಂದು ತಿನ್ನುವುದನ್ನು ನಿಲ್ಲಿಸಿದೆ. ಈ ಬಗ್ಗೆ ಕೇಳಿದಾಗ ಪಕ್ಕದ ಮನೆಯ ನಾಯಿ ಕಚ್ಚಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾನೆ.
ಕುಟುಂಬದವರು ಶಹವಾಜ್ ಅವರನ್ನು ದೆಹಲಿಯ ಸರ್ಕಾರಿ ಆಸ್ಪತ್ರೆಗಳಿಗೆ ಕರೆದೊಯ್ದರು. ಆದರೆ, ಅಲ್ಲಿ ಚಿಕಿತ್ಸೆಗೆ ದಾಖಲಾಗಿರಲಿಲ್ಲ. ಕೊನೆಗೆ ಬುಲಂದ್ ನಗರದ ಆಯುರ್ವೇದ ವೈದ್ಯರ ಬಳಿ ಚಿಕಿತ್ಸೆಗಾಗಿ ಕರೆದುಕೊಂಡು ಹೋದರು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.
ಆಂಬ್ಯುಲೆನ್ಸ್‌ನಲ್ಲಿ ಗಾಜಿಯಾಬಾದ್‌ಗೆ ವಾಪಸ್ ಕರೆತರುವಾಗ ಬಾಲಕ ಮೃತಪಟ್ಟಿದ್ದಾನೆ. ಈ ಬಗ್ಗೆ ದೂರು ದಾಖಲಾಗಿದ್ದು, ನಾಯಿಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೊತ್ವಾಲಿ ವಲಯ ಸಹಾಯಕ ಪೊಲೀಸ್ ಆಯುಕ್ತ ನಿಮಿಷ್ ಪಾಟೀಲ್ ತಿಳಿಸಿದ್ದಾರೆ.