ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ಧಾರವಾಡ, ಮಾ.6: ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಸರ್ವ ಧರ್ಮಗಳಿಗೂ ಸಂಸ್ಕಾರ ನೀಡಿದ ಮೊದಲ ಮಹಾಪುರುಷರು ಎಂದು ಹು ಧಾ ಮಹಾಪೌರ ಈರೇಶ ಅಂಚಟಗೇರಿ ಅವರು ಹೇಳಿದರು.
ಅವರು ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ರಾಜ್ಯ ಸರಕಾರದ ಆದೇಶದಂತೆ ಇದೆ ಮೊದಲ ಬಾರಿಗೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಪೂಜೆ, ಪುಷ್ಪಾರ್ಪಣೆ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಜಗದ್ಗುರು ರೇಣುಕಾಚಾರ್ಯರು ಅಂದಿನ ಕಾಲದಲ್ಲಿ ಸಮಾಜದ ಪ್ರಮುಖ 18 ಕ್ಕೂ ಹೆಚ್ಚು ಸಮುದಾಯಗಳಿಗೆ ಶಿವ ಸಂಸ್ಕಾರ ನೀಡಿ, ಅವರಿಗೂ ಮಠ,ಮಾನ್ಯದೊಂದಿಗೆ ಸಮಾನತೆ ನೀಡಿದರು. ಧಾರ್ಮಿಕ ಸುಧಾರಣೆ ಮೂಲಕ ಮಾನವ ಕುಲ ಒಂದೇ, ಹೆಣ್ಣು ಗಂಡು, ಜಾತಿ ಎನ್ನದೆ ಎಲ್ಲರಲ್ಲೂ ಬ್ರಾತೃತ್ವ ಬೆಳೆಸಿದ ಯುಗಪುರುಷರಾಗಿದ್ದಾರೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರು ಮಾತನಾಡಿ, ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯ ದೊಡ್ಡ ಸಮುದಾಯ. ಇಂದು ವೀರಶೈವ ಸಮುದಾಯ ಒಡೆದು ಚಿಕ್ಕಪುಟ್ಟ ಸಮುದಾಯಗಳನ್ನು ಮಾಡುತ್ತಿದ್ದಾರೆ. ಇದರಿಂದ ದೊಡ್ಡ ಪರಿಣಾಮವಾಗುತ್ತದೆ. ಎಲ್ಲರೂ ಎಚ್ಚರಗೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಸರೋಜಾ ಪಾಟೀಲ, ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷ ಬಂಗಾರೇಶ ಹಿರೇಮಠ, ವೀರಶೈವ ಸಂಸ್ಕೃತಿ ಸಂರಕ್ಷಣಾ ಸಮಿತಿ ಸಂಚಾಲಕ ನಾಗನಗೌಡ ನೀರಲಗಿ ಅವರು ಸಭೆ ಉದ್ದೇಶಿಸಿ ಮಾತನಾಡಿದರು.
ಜೀವನ ಶಿಕ್ಷಣ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಡಾ.ಗುರುಮೂರ್ತಿ ಯರಗಂಬಳಿಮಠ ಅವರು ಶ್ರೀ ಜಗದ್ಗುರು ರೇಣುಕಾಚಾರ್ಯರ ಕುರಿತು ವಿಶೇಷ ಉಪನ್ಯಾಸ ನೀಡಿದರು.