ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಅದ್ಧೂರಿ ಆಚರಣೆಗೆ ನಿರ್ಧಾರ

ಬೀದರ್:ಫೆ.24: ನಗರದಲ್ಲಿ ಮಾ. 5 ರಂದು ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.

ನಗರದ ಗಾಂಧಿಗಂಜ್‍ನ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ವಿವಿಧ ಸಂಘ, ಸಂಸ್ಥೆಗಳ ಸಭೆಯಲ್ಲಿ ಈ ಕುರಿತು ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು.

ಸಾರ್ವಜನಿಕ ಸಮಾರಂಭ ಹಾಗೂ ಮೆರವಣಿಗೆಯನ್ನು ಅರ್ಥಪೂರ್ಣವಾಗಿ ನಡೆಸಲು ನಿರ್ಣಯಿಸಲಾಯಿತು.

ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್ ಮಾತನಾಡಿ, ರೇಣುಕಾಚಾರ್ಯರ ಜಯಂತಿ ರಾಜ್ಯ ಸರ್ಕಾರದ ವತಿಯಿಂದಲೇ ಆಚರಿಸುತ್ತಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಮಾತನಾಡಿ, ಎಲ್ಲರೂ ಜತೆಗೂಡಿ ಅರ್ಥಪೂರ್ಣವಾಗಿ ಜಯಂತಿ ಆಚರಿಸೋಣ ಎಂದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ ಮಾತನಾಡಿ, ಪಂಚಪೀಠಗಳು ವೀರಶೈವ ಲಿಂಗಾಯತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಸರ್ಕಾರದಿಂದ ರೇಣುಕಾಚಾರ್ಯರ ಜಯಂತಿ ಆಚರಣೆಯಿಂದ ಎಲ್ಲೆಡೆ ಅವರ ತತ್ವಗಳ ಪ್ರಚಾರ ಆಗಲಿದೆ ಎಂದು ತಿಳಿಸಿದರು.

ಬಿಜೆಪಿ ಕಲಬುರಗಿ ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಮಾತನಾಡಿ, ಸನಾತನ ಧರ್ಮದ ರಕ್ಷಣೆಗೆ ರೇಣುಕಾಚಾರ್ಯರು ನೀಡಿದ ಕೊಡುಗೆ ಅಪಾರ ಎಂದು ಹೇಳಿದರು.

ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ ಮಾತನಾಡಿ, ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುವ ರೀತಿಯಲ್ಲಿ ಜಯಂತಿ ಆಚರಿಸಬೇಕಿದೆ ಎಂದು ನುಡಿದರು.

ಯುವ ಮುಖಂಡ ಜಗದೀಶ್ ಖೂಬಾ ಮಾತನಾಡಿ, ವೈಭವದ ಮೆರವಣಿಗೆಗೆ ಅಚ್ಚುಕಟ್ಟಾದ ತಯಾರಿ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಟೋಕರಿ ಕೋಳಿ ಸಮಾಜದ ಅಧ್ಯಕ್ಷ ಜಗನ್ನಾಥ ಜಮಾದಾರ್ ಮಾತನಾಡಿ, ಸರ್ವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಸರ್ಕಾರದ ವತಿಯಿಂದ ರೇಣುಕಾಚಾರ್ಯರ ಜಯಂತಿ ಆಚರಿಸಬೇಕು ಎನ್ನುವ ಬಹು ದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಜಯಂತಿ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ಕರ್ನಾಟಕ ರಾಜ್ಯ ಜಂಗಮ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಮಾತನಾಡಿ, ಶಾಲಾ, ಕಾಲೇಜು, ಸಂಘ ಸಂಸ್ಥೆಗಳಲ್ಲಿ ಸಂಭ್ರಮದಿಂದ ರೇಣುಕಾಚಾರ್ಯರ ಜಯಂತಿ ಆಚರಿಸಬೇಕು ಎಂದರು.

ಸಾನಿಧ್ಯ ವಹಿಸಿದ್ದ ಬೇಮಳಖೇಡ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯ ಮಾತನಾಡಿ, ರೇಣುಕಾದಿ ಪಂಚಾಚಾರ್ಯರು ಮನುಕುಲದ ಉದ್ಧಾರಕ್ಕೆ ಶ್ರಮಿಸಿದ್ದರು. ಲಿಂಗ ದೀಕ್ಷೆ ಕೊಟ್ಟು, ಭಕ್ತಿ ಮಾರ್ಗ ತೋರಿದ್ದರು ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣ ಸಾಳೆ ಮಾತನಾಡಿ, ಸಮಾಜಕ್ಕೆ ಒಗ್ಗಟ್ಟಿನ ಸಂದೇಶ ಕೊಡುವುದು ಅಗತ್ಯವಾಗಿದೆ ಎಂದರು.

ವಿವಿಧ ಸಮಾಜಗಳ ಮುಖಂಡರು ಜಯಂತಿ ಕುರಿತು ತಮ್ಮ ಸಲಹೆ ನೀಡಿದರು.

ಲಾಡಗೇರಿ ಹಿರೇಮಠದ ಗಂಗಾಧರ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ, ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರ ನಾಗಮೂರ್ತಿ, ಹೂಗಾರ ಸಮಾಜದ ಅಧ್ಯಕ್ಷ ಸಿದ್ದು ಫುಲಾರಿ, ಕುಂಬಾರ ಸಮಾಜದ ಅಧ್ಯಕ್ಷ ವಿಠ್ಠಲ ಕುಂಬಾರ, ಆರ್ಯ ವೈಶ್ಯ ಸಮಾಜದ ಚಂದ್ರಶೇಖರ ಗಾದಾ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಗಮೇಶ ಮೂಲಗೆ, ಮುಖಂಡರಾದ ಕುಶಾಲ್ ಪಾಟೀಲ ಗಾದಗಿ, ಜಗನ್ನಾಥ ಕರಂಜೆ, ಗುರುನಾಥ ವಡ್ಡೆ, ಸಂಗಮೇಶ ಹುಮನಾಬಾದೆ, ಅಂಬರೀಷ್ ಬಟನಾಪುರೆ, ಮಹಾಲಿಂಗ ಸ್ವಾಮಿ ಚಟ್ನಳ್ಳಿ, ವರದಯ್ಯ ಸ್ವಾಮಿ, ನಾಗರಾಜ ಮಠ, ಶಿವಶಂಕರ, ಪ್ರವೀಣ ಮಠ, ರೇವಣಸಿದ್ದಯ್ಯ ಸ್ವಾಮಿ, ಕುಮಾರಸ್ವಾಮಿ ಮತ್ತಿತರರು ಇದ್ದರು.

ಮಹೇಶ್ವರ ಸ್ವಾಮಿ ಸ್ವಾಗತಿಸಿದರು. ಬಸವರಾಜ ಸ್ವಾಮಿ ಹೆಡಗಾಪುರ ನಿರೂಪಿಸಿದರು. ಓಂಪ್ರಕಾಶ ರೊಟ್ಟೆ ವಂದಿಸಿದರು.