ರೇಣುಕಾಚಾರ್ಯ ಕೂಡಲೇ ರೈತರ ಕ್ಷಮೆ ಯಾಚಿಸಲಿ

ದಾವಣಗೆರೆ,ಡಿ.19:  ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರ ಅವಹೇಳನ ಮಾಡಿರುವ ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಕ್ಷಣವೇ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಕಳೆದ 40 ವರ್ಷಗಳಿಂದ ರೈತ ಹೋರಾಟಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟಿದ್ದಾರೆ. ಇಂತಹವರನ್ನು ರೇಣುಕಾಚಾರ್ಯ ಡೋಂಗಿ ಹೋರಾಟಗಾರ ಎಂದಿದ್ದಾರೆ. ಇಲ್ಲಿ ಡೋಂಗಿ ಯಾರೆಂದು ನಾಡಿನ ಜನತೆಗೆ ಗೊತ್ತಿದೆ ಎಂದು ಹೇಳಿದರು.ಕೋಡಿಹಳ್ಳಿ ಚಂದ್ರಶೇಖರ್ ಡೋಂಗಿಯಲ್ಲ. ಆದರೆ, ಬಿಟ್ಟಿ ಪ್ರಚಾರ ಪಡೆಯಲು ನೆರೆಯ ಸಂದರ್ಭದಲ್ಲಿ ಮೊಣಕಾಲು ಮಟ ನಿಂತಿದ್ದ ನೀರಿನಲ್ಲಿ ತೆಪ್ಪ ಚಲಾಯಿಸಿದ, ನರ್ಸ್ವೊಬ್ಬರ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ನರ್ಸ್ ರೇಣುಕಾಚಾರ್ಯ ಎಂದೇ ಖ್ಯಾತಿಯಾಗಿರುವ ರೇಣುಕಾಚಾರ್ಯ ಡೋಂಗಿ ರಾಜಕಾರಣಿಯಾಗಿದ್ದಾರೆ ಎಂದು ಕಿಡಿಕಾರಿದರು.ಕೆಎಸ್‌ಆರ್‌ಟಿಸಿಯಲ್ಲಿ ಶೇ.90 ರಷ್ಟು ನೌಕರರು ರೈತರ ಮಕ್ಕಳೇ ಇದ್ದಾರೆ. ಹೊರತು, ರಾಜಕಾರಣಿ, ಡಾಕ್ಟರ್‌ಗಳ ಮಕ್ಕಳಿಲ್ಲ. ಹೀಗಾಗಿ ರೈತರ ಮಕ್ಕಳಿಗೆ ಸಮಸ್ಯೆಯಾದಾಗ ಕೋಡಿಹಳ್ಳಿ ಚಂದ್ರಶೇಖರ್ ಅವರ ಪರವಾಗಿ ಹೋರಾಟ ಮಾಡಿದ್ದಾರೆ. ಈ ವಾಸ್ತವಿಕತೆಯನ್ನು ಅರಿತು ರೇಣುಕಾಚಾರ್ಯ ಮಾತನಾಡಬೇಕು ಎಂದರು.ನಮ್ಮ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಬಗ್ಗೆ ಅವಹೇಳನ ಮಾಡಿರುವ ಎಂ.ಪಿ.ರೇಣುಕಾಚಾರ್ಯ ತಕ್ಷಣವೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ಅವರು ಎಲ್ಲಿ ಕಾಣುತ್ತಾರೋ ಅಲ್ಲಿ ಮುಖಕ್ಕೆ ಮಸಿ ಬಳಿದು, ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚಿನ್ನಸಮುದ್ರ ಶೇಖರ ನಾಯ್ಕ ಮಾತನಾಡಿ, ಕೋಡಿಹಳ್ಳಿ ಚಂದ್ರಶೇಖರ್ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆಂದು ರೇಣುಕಾಚಾರ್ಯ ಹೇಳಿದ್ದಾರೆ. ಹಾಗಾದರೆ, ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕತ್ತೆ ಕಾಯುತ್ತಿದೇಯಾ? ಸರ್ಕಾರಕ್ಕೆ ನಿಜಕ್ಕೂ ತಾಕತ್ತು ಇದ್ದರೆ ಕೋಡಿಹಳ್ಳಿ ಚಂದ್ರಶೇಖರ್ ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂಬುದನ್ನು ತನಿಖೆ ಮಾಡಿ ಸಾಬೀತು ಪಡಿಸಬೇಕು. ಅದನ್ನು ಬಿಟ್ಟು ಬಾಯಿ ಚಪಲಕ್ಕೆ ಮನಸ್ಸಿಗೆ ಬಂದಂತೆ ಮಾತನಾಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಕರೇಕಟ್ಟೆ ಕಲೀಂವುಲ್ಲಾ, ಮಂಜುನಾಥ ಮಲ್ಲಶೆಟ್ಟಿಹಳ್ಳಿ, ಬಸವರಾಜ ದಾಗಿನಕಟ್ಟೆ, ಪ್ರಶಾಂತ್ ಮತ್ತಿತರರು ಹಾಜರಿದ್ದರು.