ರೇಣುಕಾಚಾರ್ಯರ ಜೊತೆಗೆ ಶರಭ. ವೀರಭದ್ರನ ಆರಾಧನೆ ಅಗತ್ಯ

ಬೀದರ.ಮಾ.27: ವೀರಶೈವ ಸಮಾಜದ 16 ಪಂಗಡಗಳ ಗುರು ಜಗದ್ಗುರು ರೇಣುಕಾಚಾರ್ಯರು. ಈ ಎಲ್ಲ ಪಂಗಡಗಳ ಗೋತ್ರ ಶರಭ ಹಾಗೂ ವೀರಭದ್ರ. ಆದ್ದರಿಂದ ಜಗದ್ಗುರು ರೇಣುಕಾಚಾರ್ಯರನ್ನು ಆರಾಧಿಸುವ ಪ್ರತಿ ಮನುಷ್ಯ ಶರಭ ಹಾಗೂ ವೀರಭದ್ರನನ್ನು ಆರಾಧಿಸಬೇಕೆಂದು ಶ್ರೀ ರೇಣುಕ ಮಾಹೇಶ್ವರ ಪತ್ತಿನ ಸೌಹಾರ್ದ ನಿಯಮಿತದ ಉಪಾಧ್ಯಕ್ಷ ಶ್ರೀಕಾಂತ ಸ್ವಾಮಿ ಸೋಲಪೂರ ನುಡಿದರು.

ಪ್ರತಾಪನಗರದ ಹನುಮಾನ ಮಂದಿರದ ಮುಂಭಾಗದಲ್ಲಿ ಕಲ್ಯಾಣಪ್ಪ ಮತ್ತು ಗಂಗಮ್ಮ ತಾಯಿ ಚಾರಿಟೇಬಲ್ ಟ್ರಸ್ಟ್ ಔರಾದ್ ಇವರ ಆಶ್ರಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ಉದ್ದೇಶಿಸಿ ಮಾತನಾಡಿದರು.

ಸತ್ಯಯುಗ, ಕೃತಾಯುಗ, ದ್ವಾಪಾರಯುಗದಲ್ಲೂ ಶಿವನು ತನ್ನ ಐದು ಅವತಾರಗಳನ್ನು ಪ್ರದರ್ಶಿಸಿದ್ದು ಅವರೆ ಪಂಚಾಚಾರ್ಯರು. ಅಂದಿನಿಂದ ಇಂದಿನ ವರೆಗೆ ರೇಣುಕಾದಿ ಪಂಚಾಚಾರ್ಯರ ಹಾಗೂ ಷಟಸ್ಥಲದಲ್ಲಿಯೂ ಗುರುವಿಗೆ ಶ್ರೇಷ್ಠ ಗೌರವ ನೀಡಲಾಗಿದೆ. ಗುರು ಪಂರೆಂಪರೆ ಸ್ಥಾಪನೆಯಾಗಿದ್ದು ರೇಣುಕಾಚಾರ್ಯರ ಕಾಲದಿಂದ. ಜಂಗಮರನ್ನು ಗುರ್ತಿಸಿರುವುದು ಅವರೆ. ಅಂದಿನಿಂದ ವಿಶ್ವಕ್ಕೆ ಮಾನವ ಧರ್ಮದ ಪರಿಕಲ್ಪನೆ ಪರಿಚಯಿಸಿದ ಪಂಚಾಚಾರ್ಯರ ತತ್ವ ಸಿದ್ದಾಂತಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು, ವೀರಶೈವರ ಧರ್ಮ ಗ್ರಂಥವಾದ ಸಿದ್ದಾಂತ ಶಿಖಾಮಣಿಯನ್ನು ಅಧ್ಯಯನ ಮಾಡುವಂತೆ ಕರೆ ನೀಡಿದರು.

ಪತ್ರಕರ್ತ ಶಿವಕುಮಾರ ಸ್ವಾಮಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಧರ್ಮರಹಿತ, ಜಾತಿ ರಹಿತ ಮಾನವ ಸಮಾಜ ನಿರ್ಮಿಸಿದರು. ಆದ್ದರಿಂದಲೇ ಅವರ ಅನುಯಾಯಿಗಳು ಎಲ್ಲ ಧರ್ಮದಲ್ಲೂ ಕಂಡು ಬರುವರು. ಇಂಥ ಯುಗಪುರುಷರ ಜಯಂತಿ ಸರ್ಕಾರ ಆಚರಿಸಬೇಕು, ರಾಜ್ಯದಲ್ಲಿ ವೈದಿಕ ಪಾಠಶಾಲೆಗಳನ್ನು ನಡೆಸಲು ಸರ್ಕಾರ ಉತ್ತೇಜಿಸಬೇಕೆಂದು ಕರೆ ನೀಡಿದರು.

ನಗರ ಸಭೆ ಮಾಜಿ ಉಪಾಧ್ಯಕ್ಷೆ ಗಂಗಮ್ಮ ಮಹಾಂತಯ್ಯ ಸ್ವಾಮಿ ಸಮಾರಂಭ ಉದ್ಘಾಟಿಸಿದರು. ಶ್ರೀ ರೇಣುಕ ಮಾಹೇಶ್ವರ ಪತ್ತಿನ ಸೌಹಾರ್ದ ನಿಯಮಿತದ ಅಧ್ಯಕ್ಷ ಮಹೇಶ್ವರ ಸ್ವಾಮಿ, ಆರ್.ವಿ ಬಿಡಪ್ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶರಣಯ್ಯ ಹಿರೇಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ವೈದಿಕರಾದ ಸಂಗಮೇಶ ಸ್ವಾಮಿ, ಅಂಬ್ರೀಶ ಸ್ವಾಮಿ, ಪತ್ರಕರ್ತ ಚಂದ್ರಯ್ಯ ಸ್ವಾಮಿ ಸೇರಿದಂತೆ ಬಡಾವಣೆಯ ಎಲ್ಲ ಸಮುದಾಯದ ಜನರು ಕಾರ್ಯಕ್ರಮದಲ್ಲಿ ಇದ್ದರು.