ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ


ಬಾಗಲಕೋಟೆ,ಮಾ.6 : ಸ್ತ್ರೀಯನ್ನು ಸಮಾನವಾಗಿ ಕಾಣಲು ಶಕ್ತಿ ವಿಶಿಷ್ಟಾಧೈತ ಸಿದ್ದಾಂತವನ್ನು ಹೊರತಂದವರು ಶ್ರೀ ರೇಣುಕಾಚಾರ್ಯರು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವ ಸಂಘದ ಮಿನಿ ಆಡಿಟೋರಿಯಂ ಹಾಲ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬುಡಾ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ ಮಾತನಾಡಿ ಶರಣರ, ಮಹಾತ್ಮರ ತತ್ವಾದರ್ಶ ಪಾಲಿಸಿದಾಗ ಮಾತ್ರ ಇಂತಹ ಜಯಂತಿ ಆಚರಿಸಿದಕ್ಕೆ ಸಾರ್ಥಕವಾಗುತ್ತದೆ ಎಂದರು. ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮಾತನಾಡಿ ಸರಕಾರ ಅನೇಕ ಮಹಾತ್ಮರ ಜಯಂತಿ ಆಚರಿಸುತ್ತಿದ್ದು, ಪ್ರತಿಯೊಬ್ಬ ಸಂತ, ಶರಣರ, ಆದರ್ಶಗಳಲ್ಲಿ ಒಂದಾದರೂ ಪಾಲಿಸಬೇಕಾಗುತ್ತದೆ. ರೇಣುಕಾಚಾರ್ಯರು ಹೇಳಿದ ಸಹಬಾಳ್ವೆ, ಸಹಭಾಗಿತ್ವ, ಸೌಹಾರ್ಧತೆಯಿಂದ ಬಾಳಿದರೆ ಜೀವನ ಸಾರ್ಥಕವಾಗುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಬಳ್ಳಾರಿಯ ನೇತ್ರಾಧಿಕಾರಿ, ಸಂಶೋಧಕ ಡಾ.ವೀರಭದ್ರಯ್ಯ ಮಾತನಾಡಿ ಜಗದ್ಗುರು ರೇಣುಕಾಚಾರ್ಯರು ಜನನ ರಹಿತ, ಮರಣ ರಹಿತರಾಗಿದ್ದು, ಜಾಗೃತ, ಸಿದ್ದಿ, ಸುಸುಪ್ತಿಯಲ್ಲೂ ಎಚ್ಚರಗೊಂಡ ಮಹಾಪುರುಷರಾಗಿದ್ದರು. ಇವರ ಬಗ್ಗೆ ಮತ್ತು ಕಾಲಾವಧಿ ಬಗ್ಗೆ ಅನೇಕ ವಿವಾಧಗಳಿದ್ದರೂ ಅವುಗಳಿಗೆ ಸಾಕ್ಷಿ ಎಂಬಂತೆ ಅನೇಕ ಶಾಸನಗಳು ದೊರೆತಿದ್ದು, 6ನೇ ಶತಮಾನದಲ್ಲಿ ಕಡಪ ಜಿಲ್ಲೆ ಕಮಲಾಪೂರ ತಾಲೂಕು ಕಲಮಲ್ಲ ಗ್ರಾಮದ ಆಂಜನೇಯ ದೇವಸ್ಥಾನದ ಸಿಕ್ಕ ಶಿಲಾಶಾಸನದಲ್ಲಿ ರೇವಣಲಾಕಂ ಅಂತ ಇದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಮುದಾಯದ ಮುಖಂಡರಾದ ವಿ.ಬಿ.ಚೌಕಿಮಠ, ಬಿ.ಎಸ್.ಹಿರೇಮಠ, ಬಸವರಾಜ ಪಾರ್ವತಿಮಠ, ಪ್ರಭುಸ್ವಾಮಿ ಸರಗಣಾಚಾರಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.