ರೇಣುಕಮ್ಮ : ಜಯ

ಆಡಳಿತರೂಢ ಶಾಸಕರಿಗೆ ಭಾರೀ ಹಿನ್ನಡೆ
ರಾಯಚೂರು.ನ.02- ವಾರ್ಡ್ 31 ರೇಣುಕಮ್ಮ ಭೀಮರಾಯ ಅವರ ಸದಸ್ಯತ್ವ ರದ್ದಿಗೆ ಗುಲ್ಬರ್ಗಾ ಹೈಕೋರ್ಟ್ ತಡೆಯಾಜ್ಞೆ ನೀಡಿ, ರೇಣುಕಮ್ಮ ಭೀಮರಾಯ ಅವರಿಗೆ ಮತದಾನದ ಅಧಿಕಾರ ನೀಡಬೇಕು. ಅಲ್ಲಿವರೆಗೂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಫಲಿತಾಂಶ ಪ್ರಕಟಿಸದಿರುವಂತೆಯೂ ಆದೇಶಿಸಿದೆ.
ಇಂದು ಗುಲ್ಬರ್ಗಾ ಹೈಕೋರ್ಟ್ ತುರ್ತು ವಿಚಾರಣೆ ನಡೆಸಿ, ಪ್ರಾದೇಶಿಕ ಆಯುಕ್ತರು ಕಾನೂನು ಬಾಹೀರವಾಗಿ ರೇಣುಕಮ್ಮ ಭೀಮರಾಯ ಅವರ ಸದಸ್ಯತ್ವ ರದ್ದು ಮಾಡಿದ್ದಾರೆಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅ.20 ರಂದು ಜಿಲ್ಲಾ ಪರಿಶೀಲನಾ ಸಮಿತಿಯಲ್ಲಿ ಜಾತಿ ಪ್ರಮಾಣ ಪತ್ರ ಹಿಂಪಡೆಯಲಾಗಿತ್ತು. ಇದಾದ ನಂತರ ಅ.29 ರಂದು ಪ್ರಾದೇಶಿಕ ಆಯುಕ್ತರು, ರೇಣುಕಮ್ಮ ಭೀಮರಾಯ ಅವರ ನಗರಸಭೆ ಸದಸ್ಯತ್ವವನ್ನು ರದ್ದುಗೊಳಿಸಿದ್ದರು. ಇದನ್ನು ಗುಲ್ಬರ್ಗಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ಯಾವುದೇ ಕಾನೂನಾತ್ಮಕ ಕನಿಷ್ಟ ನಿಯಮಗಳನ್ನು ಅನುಸರಿಸದೇ, ಸದಸ್ಯತ್ವ ರದ್ದುಪಡಿಸಲಾಗಿದೆ ಎನ್ನುವುದು ಪ್ರಮುಖ ಆರೋಪವಾಗಿತ್ತು. ಈ ಬಗ್ಗೆ ತುರ್ತು ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಮಧ್ಯಾಹ್ನ 12.30ರ ಸಮಯಕ್ಕೆ ಆದೇಶ ನೀಡಲಾಯಿತು. ಈ ಆದೇಶವನ್ನು ತಕ್ಷಣವೇ ಯುದ್ಧೋಪಾದಿಯಲ್ಲಿ ಜಿಲ್ಲಾಡಳಿತಕ್ಕೆ ತಲುಪಿಸುವ ಮೂಲಕ ರೇಣುಕಮ್ಮ ಅವರಿಗೆ ಮತದಾನದ ಹಕ್ಕು ಪಡೆಯಲಾಯಿತು. ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲ್ ಅವರು ರಾಜಕೀಯ ಒತ್ತಡದ ಮೂಲಕ ರೇಣುಕಮ್ಮ ಭೀಮರಾಯ ಅವರ ಸದಸ್ಯತ್ವ ರದ್ದಿಗೆ ಏನೆಲ್ಲಾ ಪರೋಕ್ಷ ಪ್ರಯತ್ನ ಮಾಡಿದರೂ, ಕೊನೆಗೂ ನ್ಯಾಯಾಲಯದ ಮೂಲಕ ರೇಣುಕಮ್ಮ ತನ್ನ ಮತದಾನದ ಹಕ್ಕು ಪಡೆಯುವಲ್ಲಿ ಯಶಸ್ವಿಯಾಗಿರುವುದು ಆಡಳಿತರೂಢ ಪಕ್ಷ ಭಾರೀ ಮುಜುಗರಕ್ಕೆಡೆಯಾಗುವಂತೆ ಮಾಡಿದೆ.