ರೇಡ್ ಜೋನ್ ಬೀದರ್‍ನಲ್ಲಿ ನಗರ ಸಭೆ ಚುನಾವಣೆ ನಡೆಸುವುದು ಎಷ್ಟು ಸೂಕ್ತ?

ವಿಶೇಷ ವರದಿ: ಶಿವಕುಮಾರ ಸ್ವಾಮಿ

ಬೀದರ.ಏ.03: ಇಡೀ ದೇಶದಲ್ಲಿ ಕೋವಿಡ್ 2ನೇ ಅಲೆ ಜೋರು ಪಡೆದುಕೊಂಡಿದ್ದು, ಕೊರೋನಾ ಹೆಚ್ಚಳದಲ್ಲಿ ಮಹಾರಾಷ್ಟ್ರ ನಂತರದ ಸ್ಥಾನದಲ್ಲಿ ಕರ್ನಾಟಕ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ನಮ್ಮ ರಾಜ್ಯದಲ್ಲಿ ಬೆಂಗಳೂರು ನಗರ, ಕಲಬುರಗಿ ಹೊರತುಪಡಿಸಿದರೆ ಮೂರನೇ ಸ್ಥಾನದಲ್ಲಿರುವ ಬೀದರ್ ಈಗ ಕೋವಿಡ್ ವಿಚಾರದಲ್ಲಿ ರೇಡ್ ಜೋನ್‍ನಲ್ಲಿರುವುದು ಕಳವಳಕಾರಿ ಸಂಗತಿ.

ಇಂಥ ಸನ್ನಿವೇಶದಲ್ಲಿಯೇ ಬಿ.ನಾರಾಯಣರಾವ ಅವರ ಅಕಾಲಿಕ ನಿಧನದಿಂದ ತೆರವಾದ ಬಸವಕಲ್ಯಾಣ ಉಪ ಚುನಾವಣೆ ಎದುರಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಬಂದಿದೆ. ಅದರ ಜೊತೆಗೆ ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೀದರ್ ನಗರ ಸಭೆ ಚುನಾವಣೆ ಘೋಷಣೆ ಆಗಿರುತ್ತದೆ. ಬಸವಕಲ್ಯಾಣ ಉಪ ಚುನಾವಣೆ ಕೇವಲ ಓಣಿ ಓಣಿಗಳು ಹಾಗೂ ಗ್ರಾಮೀಣ ಪ್ರದೇಶಗಳ ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುವ ಅನಿವಾರ್ಯತೆ ಇರುತ್ತದೆ. ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಇಡೀ ಜಿಲ್ಲೆಯಲ್ಲಿ ಕೇವಲ 14000 ಮತದಾರರನ್ನು ಹೊಂದಿದ್ದು ಅದು ಅಷ್ಟು ಪರಿಣಾಮ ಬೀರುವುದಿಲ್ಲ. ಆದರೆ ನಗರ ಸಭೆ ಚುನಾವಣೆಗಳು ಮನೆ, ಮನೆಗಳಿಗೆ ತೆರಳುವ ಅನಿವಾರ್ಯತೆ ಇರುವುದರಿಂದ ಕೋವಿಡ್ ಮಹಾಸ್ಪೋಟವೇ ಸಂಭವಿಸಬಹುದು. ಇದು ಇಡೀ ಬೀದರ್ ನಗರ ವಾಸಿಗಳ ಪ್ರಾಣ ಹಿಂಡುವ ಚುನಾವಣೆಯಾಗಬಹುದೆಂದು ತಜ್ಞರ ಅಭಿಪ್ರಾಯವಾಗಿದೆ.

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಇನ್ನೂರರ ಗಡಿ ದಾಟುತ್ತಿರುವ ಮಹಾಮಾರಿ ನಗರ ಸಭೆ ಚುನಾವಣೆಯಿಂದ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು ರಾಜ್ಯ ಚುನಾವಣಾ ಆಯೋಗವು ಕೂಡಲೇ ನಗರ ಸಭೆ ಚುನಾವಣೆ ಮುಂದೂಡಬೇಕೆಂದು ಡಾ.ಗುರುಪಾದಪ್ಪ ನಾಗಮಾರಪಳ್ಳೀ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಧ್ಯಕ್ಷರು ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಮನವಿ ಮಾಡಿದ್ದಾರೆ.