ರೆಸಾರ್ಟ್ ಮೇಲೆ ಪೊಲೀಸರ ದಾಳಿ : ಬಂದೂಕು, ಚಾಕು, ಕತ್ತಿ, ಮದ್ಯದ ಬಾಟಲಿಗಳು ವಶ..!

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಆ. 13: ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಆರೋಪದ ಮೇರೆಗೆ, ರೆಸಾರ್ಟ್ ವೊಂದರ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದ ಘಟನೆ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ‘ವಿಹಂಗಮ ರೆಸಾರ್ಟ್ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ1 ಲಕ್ಷ ರೂ. ಮೌಲ್ಯದ ಡಬ್ಬಲ್ ಬ್ಯಾರಲ್ ಬಂದೂಕು, 25 ಸಾವಿರ ರೂ. ಮೌಲ್ಯದ 310 ಜೀವಂತ ಗುಂಡುಗಳು, ತಲಾ ಒಂದು ಕತ್ತಿ ಹಾಗೂ ಚಾಕು,ಮೂರು ಕಾಡು ಕೋಣದ ಕೊಂಬಿನ ಟ್ರೋಫಿ, ಆರು ಜಿಂಕೆ ಕೊಂಬಿನ ಟ್ರೊಫಿ, 7659 ರೂ. ಮೌಲ್ಯದ 51 ಬಿಯರ್ ಬಾಟಲಿಗಳು, 1 ಲಕ್ಷ ರೂ. ಮೌಲ್ಯದ ಮದ್ಯ ತುಂಬಿದ ಬಾಟಲಿಗಳು ಮತ್ತು ಸಿಸಿ ಕ್ಯಾಮರಾ ಡಿವಿಆರ್ ಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ, ಇನ್ಸ್’ಪೆಕ್ಟರ್ ಅಶ್ವತ್ಥಗೌಡ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಸಾಗರ್ ಅತ್ತರವಾಲ, ನವೀನ್ ಕುಮಾರ್ ಮಠಪತಿ, ನವೀನ್ ಕುಮಾರ್ ಅಂತರಗಟ್ಟಿ, ಪ್ರವೀಣ್  ಹಾಗೂ 50 ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.