ರೆಮ್‌ಡಿಸಿವಿರ್ ಹೆಚ್ಚಿನ ಬೆಲೆಗೆ ಮಾರಾಟ ಮೂವರು ಸೆರೆ

ಬೆಂಗಳೂರು,ಏ.೧೮- ಕೊರೊನಾ ಚಿಕಿತ್ಸೆಗೆ ಅಗತ್ಯವಾದ ರೆಮ್‌ಡಿಸಿವಿರ್ ಇಂಜೆಕ್ಷನ್‌ಗಳನ್ನು ಅಕ್ರಮ ಸಂಗ್ರಹ ಮಾರಾಟದ ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು ರೆಮ್‌ಡಿಸಿವಿರ್ ಸಂಗ್ರಹಿಸಿ
ಹೆಚ್ಚು ಬೆಲೆಗೆ ಮಾರುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸದ್ದುಗುಂಟೆಪಾಳ್ಯ ಹಾಗೂ ಮಡಿವಾಳದ ರಾಜೇಶ್, ಶಕೀಬ್ ಹಾಗೂ ಸೊಹೈಲ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಅಕ್ರಮವಾಗಿ ರೆಮ್‌ಡಿಸಿವಿರ್ ಇಂಜೆಕ್ಷನ್ ಸಂಗ್ರಹಿಸಿದ್ದ ಆರೋಪಿಗಳು, ಕಾಳಸಂತೆಯಲ್ಲಿ ಪ್ರತಿ ಇಂಜೆಕ್ಷನ್ ಗೆ ೧೦,೫೦೦ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು.ಆರೋಪಿಗಳಿಂದ ೧೧ ಚುಚ್ಚುಮದ್ದಿನ ಬಾಟಲ್‌ಗಳನ್ನ ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿ ರಾಜೇಶ್ ಗುರುಶ್ರೀ ಮೆಡಿಕಲ್ ಶಾಪ್ ನಡೆಸುತ್ತಿರುವುದು ಪತ್ತೆಯಾಗಿದೆ.
ಆರೋಪಿಗಳಿಗೆ ಇಂಜೆಕ್ಷನ್ ಸಿಗುತ್ತಿದ್ದ ಮೂಲದ ಬಗ್ಗೆ ತನಿಖೆ ನಡೆಯುತ್ತಿದ್ದು ಸದ್ದುಗುಂಟೆಪಾಳ್ಯ ಹಾಗೂ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.