ರೆಮ್‌ಡಿಸಿವಿರ್ ಇಂಜೆಕ್ಷನ್ ಕಳ್ಳಸಾಗಣೆ ಆಂಬುಲೆನ್ಸ್​ ಚಾಲಕರ ಸೆರೆ

ಬೆಂಗಳೂರು,ಏ.25- ಅಕ್ರಮವಾಗಿ ರೆಮ್‌ಡಿಸಿವಿರ್ ಇಂಜೆಕ್ಷನ್ ಕಳ್ಳಸಾಗಣೆ ಮಾಡುತ್ತಿದ್ದ ಆಂಬುಲೆನ್ಸ್​ ಚಾಲಕನನ್ನು ರಾಯಚೂರಿನ ರಿಮ್ಸ್‌ ನಿರ್ದೇಶಕ ಡಾ.ಪೀರಾಪುರರಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ರಾಯಚೂರಿನ ಒಪೆಕ್ ಬಳಿ ಆ್ಯಂಬುಲೆನ್ಸ್ ನಿಲ್ಲಿಸಿ, ಚಾಲಕ ಬಂಡೆಪ್ಪನನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಜೇಬಿನಲ್ಲಿ ವಯಲ್‌ಗಳು ಪತ್ತೆಯಾಗಿದ್ದವು. ಚಾಲಕನ ವಿರುದ್ಧ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದಾರೆ. ಚಾಲಕ ರೆಮ್​ಡಿಸಿವಿರ್ ಇಂಜೆಕ್ಷನ್ ಸಾಗಾಟ ಮಾಡುತ್ತಿದ್ದ ವಿಡಿಯೊ ವೈರಲ್ ಆಗಿತ್ತು.
ನಿಗದಿತ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ರೆಮ್‌ಡಿಸಿವಿರ್‌ ಇಂಜೆಕ್ಷನ್‌ ಮಾರಾಟ ಮಾಡುತ್ತಿದ್ದ ಆನೇಕಲ್ ತಾಲ್ಲೂಕು ಜಿಗಣಿ ಗ್ರಾಮದ ಸುಹಾಸ್ ಆಸ್ಪತ್ರೆಯ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ಅಲಿ ಮತ್ತು ರಕ್ಷಿತ್‌ ಮೇಲೆ ಅಕ್ರಮವಾಗಿ ಔಷಧ ಮಾರಾಟ ಮಾಡುತ್ತಿದ್ದ ಆರೋಪ ಹೊರಿಸಲಾಗಿದೆ.
ಆರೋಪಿಗಳು ರೆಮ್​ಡಿಸಿವಿರ್ ಇಂಜೆಕ್ಷನ್​ಗಳನ್ನು 15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಮಫ್ತಿಯಲ್ಲಿ ಜಿಗಣಿ ಠಾಣೆಯ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದರು. 2 ಇಂಜೆಕ್ಷನ್‌ಗೆ 30 ಸಾವಿರ ಪಡೆಯುವಾಗ ಆರೋಪಿಗಳನ್ನು ಪೊಲೀಸರು ಬಂಧಿಸಿದರು. ಬಡ ಕುಟುಂಬದ ವ್ಯಕ್ತಿಯೊಬ್ಬರಿಗೆ ಔಷಧ ಬೇಕಿತ್ತು. ಈ ವೇಳೆ ಶಾಂತಿನಗರದಿಂದ ತರಿಸಿಕೊಡುವುದಾಗಿ ಹೇಳಿದ್ದ ಸಿಬ್ಬಂದಿ ಹಣ ಪಡೆಯಲು ಮುಂದಾಗಿದ್ದರು ಎಂಬ ದೂರುಗಳಿವೆ. ಕಳೆದ ಬಾರಿ ಕೊವಿಡ್ ಸಮಯದಲ್ಲೂ ಸಾಕಷ್ಟು ದೂರು ಕೇಳಿಬಂದಿತ್ತು.
ಯಾದಗಿರಿಗೆ ಸಾಗಾಟ:
ಬೀದರ್‌ನಿಂದ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ 50 ರೆಮ್‌ಡಿಸಿವಿರ್ ಇಂಜೆಕ್ಷನ್​ಗಳನ್ನು ಸಾಗಿಸಲಾಗಿದೆ.ಯಾದಗಿರಿ ತಾಲೂಕು ಆರೋಗ್ಯ ಅಧಿಕಾರಿ ವಾಹನದಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್​ಗಳನ್ನು ಕೊಂಡೊಯ್ಯಲಾಯಿತು. ಇಂಜೆಕ್ಷನ್ ಕೊಂಡೊಯ್ದ ರೀತಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನಗಳು ವ್ಯಕ್ತವಾಗಿವೆ.