ರೆಮ್‌ಡಿಸಿವಿರ್ ಅಕ್ರಮ ಮಾರಾಟ ಕಾವೇರಿ ಆಸ್ಪತ್ರೆ ನರ್ಸ್ ಸೆರೆ


ಬೆಂಗಳೂರು, ಮೇ.೧೮- ಕೊರೊನಾಗೆ ಬಳಸುವ ರೆಮ್‌ಡಿಸಿವಿರ್ ಚುಚ್ಚುಮದ್ದುನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದ ಅನಂತನಗರದ ಮನು( ೨೬) ಬಂಧಿತ ಆರೋಪಿಯಾಗಿದ್ದಾನೆ.ಬಂಧಿತನಿಂದ ೫೦ ಸಾವಿರ ಮೌಲ್ಯದ ೧೩ ರೆಮ್‌ಡಿಸಿವಿರ್ ಚುಚ್ಚುಮದ್ದುನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ.ಶರಣಪ್ಪ ಅವರು ತಿಳಿಸಿದ್ದಾರೆ.
ಆರೋಪಿಯು ಕೋನಪ್ಪನ ಅಗ್ರಹಾರದ ಕಾವೇರಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು ಆಸ್ಪತ್ರೆಯಲ್ಲಿನ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕೊಡುವ ರೆಮ್‌ಡಿಸಿವಿರ್ ೨ ಡೋಸೆಜ್‌ಗಳಲ್ಲಿ ೧ ಡೋಸೆಜ್ ನ್ನು ಮಾತ್ರ ರೋಗಿಗೆ ನೀಡಿ ಮತ್ತೊಂದನ್ನು ಕಳ್ಳತನ ಮಾಡುತ್ತಿದ್ದ. ಹೊರಗಡೆ ರೆಮ್‌ಡಿಸಿವಿರ್ ಚುಚ್ಚುಮದ್ದು ಅಭಾವದ ಲಾಭಮಾಡಿಕೊಂಡು ಒಂದು ಚುಚ್ಚುಮದ್ದುನ್ನು ೨೫ ಸಾವಿರ ರೂಗಳ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕಗ್ಗದಾಸಪುರ ಮುಖ್ಯ ರಸ್ತೆಯ, ಆಭಯಹಸ್ತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬಳಿ ಆರೋಪಿಯು ರೆಮ್‌ಡಿಸಿವಿರ್ ಔಷಧಿಯನ್ನು ತಂದು ಅಧಿಕ ದರಕ್ಕೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಬೈಯ್ಯಪ್ಪನಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟಾಚಲಪತಿ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.