ರೆಮ್ಡೆಸಿವಿಯರ್ ಇಂಜೆಕ್ಷನ್ ಕೊರತೆ ನಿವಾರಣೆಗೆ ಆಗ್ರಹ

ಕಲಬುರಗಿ.ಏ.20:ಕೊರೋನಾ ರೋಗಿಯ ಜೀವ ಉಳಿಸಲು ಅಗತ್ಯವಿರುವ ಔಷಧಿಗಳಲ್ಲಿ ಒಂದಾದ ರೆಮ್‍ಡೆಸಿವಿಯರ್ ಇಂಜೆಕ್ಷನ್ ಕೊರತೆ ಕಾಡುತ್ತಿದೆ. ಕಾಳಸಂತೆಯಲ್ಲಿ ಈ ಔಷಧಿ ಮಾರಾಟವಾಗುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ಜಾತ್ಯಾತೀತ ಜನತಾದಳದ ಉತ್ತರ ಘಟಕದ ಅಧ್ಯಕ್ಷ ಶ್ರೀಪ್ರಕಾಶ್ ಖಡ್ಕೆ ಅವರು ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಇಂಜೆಕ್ಷನ್ ಸುತ್ತಮುತ್ತಲಿನ ದಲ್ಲಾಳಿಗಳ ಕಾಟ ತಪ್ಪಿಸಬೇಕು. ಕಾಳಸಂತೆ ತಪ್ಪಿಸಿ ಪಾರದರ್ಶಕವಾಗಿ ಎಲ್ಲರಿಗೂ ಈ ಇಂಜೆಕ್ಷನ್ ದೊರಕುವಂತೆ ಮಾಡಬೇಕು. ರಾಜ್ಯ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ ಈ ವಿಚಾರದಲ್ಲಿ ಕಾರ್ಯತತ್ಪರವಾಗಬೇಕು. ಯುದ್ದೋಪಾದಿಯಲ್ಲಿ ಕಾಳಸಂತೆಕೋರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ನಿಜವಾದ ಬೆಲೆಗೆ ಇಂಜೆಕ್ಷನ್ ಜನತೆಗೆ ದೊರಕುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸಿಟಿ ಸ್ಕ್ಯಾನ್‍ಗಳಲ್ಲಿ 10ಕ್ಕೂ ಮೇಲ್ಪಟ್ಟು ರೀಡಿಂಗ್ ಬಂದವರಿಗೆ ಮಾತ್ರ ರೆಮ್‍ಡೆಸಿವೀರ್ ಇಂಜೆಕ್ಷನ್ ಕೊಡಬೇಕು ಎಂಬುದು ಕೊರೋನಾ ಚಿಕಿತ್ಸೆಯ ಶಿಷ್ಠಾಚಾರವಾಗಿದೆ. ಆದಾಗ್ಯೂ, ಅನೇಕ ಪ್ರಕರಣಗಳಲ್ಲಿ ಸಿಟಿ ಸ್ಕ್ಯಾನ್ ರೀಡಿಂಗ್ ಹತ್ತಕ್ಕಿಂತ ಕಮ್ಮಿ ಇದ್ದರೂ ಸಹ ರೆಮ್‍ಡೆಸಿವೀರ್ ಇಂಜೆಕ್ಷನ್ ಕೊಡಲಾಗುತ್ತಿದೆ. ಇದರಿಂದಲೂ ಅದರ ಕೊರತೆ ಕಾಡುವಂತಾಗಿದೆ. ಸಂಬಂಧಪಟ್ವವರು ಇಂತಹ ದುರ್ಬಳಕೆ ಮೇಲೆಯೂ ಸಹ ನಿಗಾ ಇಡಬೇಕು ಎಂದು ಅವರು ಆಗ್ರಹಿಸಿದರು.
ಕೋವಿಡ್ ಸೋಂಕಿತರಿಗೆ ನಗರದ ಆಸ್ಪತ್ರೆಗಳಲ್ಲಿ ಸರಿಯಾದ ಹಾಸಿಗೆಗಳ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ಕೂಡಲೇ ಸಂಕಷ್ಟದಲ್ಲಿರುವ ಬಡ ರೋಗಿಗಳಿಗೆ ನೆರವಾಗಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅರವಿಂದ್ ರಂಜೇರಿ, ಆನಂದ್ ಪಾಟೀಲ್, ಶಿವಕುಮಾರ್, ಪ್ರವೀಣ್ ಜಾಧವ್, ಮಲ್ಲಿಕಾರ್ಜುನ್ ಮುಂತಾದವರು ಉಪಸ್ಥಿತರಿದ್ದರು.