ರೆಮ್ಡೆಸಿವಿಯರ್ ಇಂಜೆಕ್ಷನ್ ಕೊರತೆಯಿಂದಾಗಿ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ: ಡಾ. ಅಜಯಸಿಂಗ್ ಆರೋಪ

ಕಲಬುರಗಿ.ಏ.17:ರಾಜ್ಯದಲ್ಲಿ ಕೊರೋನಾ ಸೋಂಕು ವೇಗವಾಗಿ ಹರಡುತ್ತಿದೆ. ಅಂಕಿ, ಅಂಶಗಳು ಹೆಮ್ಮಾರಿ ಸೋಂಕು ಅಪಾಯದ ಮಟ್ಟ ಮೀರಿದ ಕುರಿತು ಒಂದೇ ಸವನೇ ಎಚ್ಚರಿಕೆಯ ಗಂಟೆ ಬಾರಿಸುತ್ತಿವೆ ಎಂದು ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಅವರು ಕಳವಳ ವ್ಯಕ್ತಪಡಿಸಿದರು.
ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಎರಡನೇ ಲಸಿಕೆಯನ್ನು ಪಡೆದ ನಂತರ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸ್ಮಶಾನಗಳಲ್ಲಿ ಚಿತೆಗಳು ಅವಿರತವಾಗಿ ಉರಿಯುತ್ತಿವೆ. ಆರೋಗ್ಯ ವ್ಯವಸ್ಥೆ ಕುಸಿಯುತ್ತಿದ್ದು, ಬೆಡ್‍ಗಳು ಖಾಲಿ ಇಲ್ಲ ಎಂಬ ಫಲಕಗಳು ಆಸ್ಪತ್ರೆಗಳ ಮುಂದೆ ನೇತಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕೊರೋನಾ ಮೊದಲ ಅಲೆಯಿಂದಲೇ ಪಾಠ ಕಲಿತು ಇಷ್ಟೊತ್ತಿಗಾಗಲೇ ಎರಡನೇ ಅಲೆಯ ಆವಾಂತರಗಳನ್ನು ಎದುರಿಸಲು ಸಿದ್ಧವಾಗಬೇಕಿದ್ದ ರಾಜ್ಯ ಸರ್ಕಾರ ಬೆಂಕಿ ಬಿದ್ದಾಗ ಬಾವಿ ತೋಡುವ ಕೆಲಸಕ್ಕೆ ಮುಂದಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ಕೊರೋನಾ ಹೆಮ್ಮಾರಿಯಿಂದಾಗಿ ಇಷ್ಟೆಲ್ಲ ರದ್ದಾಂತಗಳು ರಾಜ್ಯದಲ್ಲಿ ಸಂಭವಿಸುತ್ತಿದ್ದರೂ ಸಹ ಕೋವಿಡ್-2ನೇ ಅಲೆಯ ನಿಯಂತ್ರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ ಕೇವಲ ಹೇಳಿಕೆಗಳಲ್ಲಿಯೇ ಕಾಲಹರಣ ಮಾಡುತ್ತ ಕುಳಿತಿದೆ ಎಂದು ಅವರು ಕಟುವಾಗಿ ಟೀಕಿಸಿದರು.
ಕೊರೋನಾ ರೋಗಿಯ ಜೀವ ಉಳಿಸಲು ಅಗತ್ಯವಿರುವ ಔಷಧಿಗಳಲ್ಲಿ ಒಂದಾದ ರೆಮ್‍ಡೆಸಿವಿಯರ್ ಇಂಜೆಕ್ಷನ್ ಕೊರತೆ ಕಾಡುತ್ತಿದೆ. ಕಾಳಸಂತೆಯಲ್ಲಿ ಈ ಔಷಧಿ ಮಾರಾಟವಾಗುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಇನ್ನು ಕೋವಿಡ್ ವಿರುದ್ಧ ಹೋರಾಡಲು ಲಸಿಕಾಕರಣ ಆರಂಭವಾದರೂ ಕಳೆದ ಐದು ದಿನಗಳಿಂದ ಕೋವಿಡ್ ಲಸಿಕೆಯ ಪೂರೈಕೆಯೇ ಇಲ್ಲದೇ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಲಸಿಕಾಕರಣಕ್ಕೆ ತೀವ್ರ ಹಿನ್ನಡೆಯಾಗಿದೆ. ಸೋಂಕು ಕಟ್ಟಿ ಹಾಕಲು ಸೂಕ್ತ ಪರೀಕ್ಷೆ, ಚಿಕಿತ್ಸೆ, ಮನೆ ಆರೈಕೆ, ಅಂಬುಲೆನ್ಸ್ ಸೌಲಭ್ಯ ಮೊದಲಾದವುಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕಾಗಿದ್ದ ಸರ್ಕಾರ ಎಡವಿದೆ. ಇದರತ್ತ ಗಮನ ನೀಡಬೇಕಾದ ಸರ್ಕಾರ ಯಾವುದಕ್ಕೂ ಸ್ಪಂದಿಸದೇ ಮೌನವಾಗಿದೆ ಎಂದು ಅವರು ದೂರಿದರು.
ಬೆಂಗಳೂರು ಸೇರಿದಂತೆ ರಾಜ್ಯದ 9 ನಗರಗಳಲ್ಲಿ ಕೊರೋನಾ ಎರಡನೇ ಅಲೆ ನಾಗಾಲೋಟದಲ್ಲಿದೆ. ನಿತ್ಯ ಸಾವಿರಾರು ಪ್ರಕರಣಗಳು ವರದಿಯಾಗುತ್ತಿವೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಕೊಡಿಸುವ ಜವಾಬ್ದಾರಿ ಸರ್ಕಾರ ವಹಿಸಬೇಕು. ಆದಾಗ್ಯೂ, ಕೊರೋನಾ ಸೋಂಕಿತರ ಚಿಕಿತ್ಸೆಗೆ ಮೂಲದಲ್ಲಿಯೇ ಬೇಕಾದ ರೆಮ್‍ಡೆಸಿವೀರ್ ಎಂಜೆಕ್ಷನ್ ಕೊರತೆ ಕಾಡುತ್ತಿದೆ. ಹೀಗಾಗಿ ಈ ಇಂಜೆಕ್ಷನ್ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ ಎಂದು ಅವರು ಆರೋಪಿಸಿದರು.
ರೆಮ್‍ಡೆಸಿವೀರ್ ಇಂಜೆಕ್ಷನ್ ಒಂದು ವಯಲ್ ಬೆಲೆ 1,200ರೂ.ಗಳು. ಆದಾಗ್ಯೂ, ದಲ್ಲಾಳಿಗಳು ಸೇರಿಕೊಂಡು ಕಾಳಸಂತೆಯಲ್ಲಿ ಈ ಜೀವ ಉಳಿಸುವ ಔಷಧಿಯ ಬೆಲೆ 12000ರೂಗಳಿಗೆ ತಂದಿಟ್ಟಿದ್ದಾರೆ. ಕಡು ಬಡವರು ಕೊರೋನಾದಿಂದ ಬಳಲುತ್ತಿದ್ದಾರೆ. ಇಂತಹವರು ದುಬಾರಿ ಬೆಲೆಗೆ ಇಂಜೆಕ್ಷನ್ ಕೊಳ್ಳಲಾಗದೇ ಪರಿತಪಿಸುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಇಂಜೆಕ್ಷನ್ ಸುತ್ತಮುತ್ತಲಿನ ದಲ್ಲಾಳಿಗಳ ಕಾಟ ತಪ್ಪಿಸಬೇಕು. ಕಾಳಸಂತೆ ತಪ್ಪಿಸಿ ಪಾರದರ್ಶಕವಾಗಿ ಎಲ್ಲರಿಗೂ ಈ ಇಂಜೆಕ್ಷನ್ ದೊರಕುವಂತೆ ಮಾಡಬೇಕು. ರಾಜ್ಯ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ ಈ ವಿಚಾರದಲ್ಲಿ ಕಾರ್ಯತತ್ಪರವಾಗಬೇಕು. ಯುದ್ದೋಪಾದಿಯಲ್ಲಿ ಕಾಳಸಂತೆಕೋರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ನಿಜವಾದ ಬೆಲೆಗೆ ಇಂಜೆಕ್ಷನ್ ಜನತೆಗೆ ದೊರಕುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸಿಟಿ ಸ್ಕ್ಯಾನ್‍ಗಳಲ್ಲಿ 10ಕ್ಕೂ ಮೇಲ್ಪಟ್ಟು ರೀಡಿಂಗ್ ಬಂದವರಿಗೆ ಮಾತ್ರ ರೆಮ್‍ಡೆಸಿವೀರ್ ಇಂಜೆಕ್ಷನ್ ಕೊಡಬೇಕು ಎಂಬುದು ಕೊರೋನಾ ಚಿಕಿತ್ಸೆಯ ಶಿಷ್ಠಾಚಾರವಾಗಿದೆ. ಆದಾಗ್ಯೂ, ಅನೇಕ ಪ್ರಕರಣಗಳಲ್ಲಿ ಸಿಟಿ ಸ್ಕ್ಯಾನ್ ರೀಡಿಂಗ್ ಹತ್ತಕ್ಕಿಂತ ಕಮ್ಮಿ ಇದ್ದರೂ ಸಹ ರೆಮ್‍ಡೆಸಿವೀರ್ ಇಂಜೆಕ್ಷನ್ ಕೊಡಲಾಗುತ್ತಿದೆ. ಇದರಿಂದಲೂ ಅದರ ಕೊರತೆ ಕಾಡುವಂತಾಗಿದೆ. ಸಂಬಂಧಪಟ್ವವರು ಇಂತಹ ದುರ್ಬಳಕೆ ಮೇಲೆಯೂ ಸಹ ನಿಗಾ ಇಡಬೇಕು ಎಂದು ಅವರು ಆಗ್ರಹಿಸಿದರು.
ಕೊರೋನಾ ಸೋಂಕಿತರು ಅವರ ಸಹಾಯಕರು ತಕ್ಷಣಕ್ಕೆ ಅಗತ್ಯ ಮಾಹಿತಿ ಪಡೆಯಲು ಟೋಲ್‍ಫ್ರೀ ಸಹಾಯವಾಣಿ ಆರಂಭಿಸಬೇಕು ಎಂದು ಡಾ. ಅಜಯಸಿಂಗ್ ಅವರು ಒತ್ತಾಯಿಸಿದರು.
ಆಸ್ಪತ್ರೆಗಳು, ಹಾಸಿಗೆಗಳ ಸಂಖ್ಯೆ, ಐಸಿಯೂ ಹಾಸಿಗೆಗಳು, ವಾರ್ಡ್‍ಗಳೂ ಸೇರಿದಂತೆ ಕೊರೋನಾ ಚಿಕಿತ್ಸೆಯ ಎಲ್ಲ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಜನತೆಗೆ ಒದಗಿಸಬೇಕು. ಕೊರೋನಾ ಸಂಬಂಧಿತ ಎಲ್ಲ ವಿಚಾರಗಳು ಪಾರದರ್ಶಕವಾಗಿರಬೇಕು. ಎಲ್ಲವೂ ಜನರಿಗೆ ತಲುಪುವಂತೆ ಯೋಚಿತವಾಗಿ ರೂಪಿಸಬೇಕು. ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಕಾಳಜಿ ಕೇಂದ್ರಗಳನ್ನು ಆರಂಬಿಸಬೇಕು ಎಂದು ಅವರು ಆಗ್ರಹಿಸಿದರು.
ಮಹಾರಾಷ್ಟ್ರದಿಂದ ಬರುತ್ತಿರುವ ವಲಸೆ ಕಾರ್ಮಿಕರ ಚಲನವಲನಗಳ ಮೇಲೆ ತೀವ್ರ ನಿಗಾ ಇಡುವಂತೆಯೂ ಒತ್ತಾಯಿಸಿದ ಅವರು, ಕಲಬುರ್ಗಿ, ಬೀದರ್ ಸೇರಿದಂತೆ ಕಲ್ಯಾಣ ನಾಡಿನ ಜಿಲ್ಲೆಗಳಲ್ಲಿಯೂ ಕೊರೋನಾ ಆರ್ಭಟ ಜೋರಾಗಿದ್ದನ್ನು ಅರಿತು ಸರ್ಕಾರ ಈ ಭಾಗದಲ್ಲಿನ ಆಸ್ಪತ್ರೆಗಳನ್ನು ತುರ್ತು ಪರಿಸ್ಥಿತಿಯನ್ನು ಎದುರಿಸಲು ಯುದ್ದೋಪಾದಿಯಲ್ಲಿ ಅಣಿಗೊಳಿಸಬೇಕು. ಕೊರೋನಾ ಸೋಂಕು ಬಲಿ ಪಡೆಯುವ ವೇಗ ಹೆಚ್ಚುವ ಮೊದಲೇ ಅದನ್ನು ಸಮರ್ಥವಾಗಿ ಕಟ್ಟಿಹಾಕುವ ಕೆಲಸಕ್ಕೆ ಸರ್ಕಾರ ಇನ್ನಾದರೂ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಡಾ. ಅಜಯಸಿಂಗ್ ಅವರು ಈ ಮೊದಲು ತಮ್ಮ ತಾಯಿ ಶ್ರೀಮತಿ ಪ್ರಭಾವತಿ ಧರ್ಮಸಿಂಗ್ ಅವರೊಂದಿಗೆ ಮೊದಲ ಲಸಿಕೆಯನ್ನು ಪಡೆದಿದ್ದರು. ಎರಡನೇ ಲಸಿಕೆಯನ್ನು ಪಡೆಯುವ ಸಂದರ್ಭದಲ್ಲಿ ಡಾ. ಸಿದ್ದು ಪಾಟೀಲ್, ವೈದ್ಯರು, ದಾದಿಯರು ಮುಂತಾದವರು ಉಪಸ್ಥಿತರಿದ್ದರು.