ರೆಮ್ಡಿಸಿವಿರ್ ಅಕ್ರಮ ಮಾರಾಟ ಮೂವರು ಸೆರೆ


ಬೆಂಗಳೂರು,ಮೇ.೨೬-ಅಕ್ರಮವಾಗಿ ಹೆಚ್ಚಿನ ಬೆಲೆಗೆ ರೆಮ್ಡಿಸಿವಿರ್ ಚುಚ್ಚುಮದ್ದುನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ದೊಡ್ಡತೂಗೂರಿನ ಸಂಜೀವ್ ಕುಮಾರ್(೩೨) ಪ್ರತೀಕ್ (೨೭)ಹಾಗೂ ಶಾಂತಿಪುರದ ಅಭಿಜಿತ್ (೨೦)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಕೇರಳದಿಂದ ಕಡಿಮೆ ಬೆಲೆಗೆ ರೆಮ್ಡಿಸಿವಿರ್ ಚುಚ್ಚುಮದ್ದು ಗಳನ್ನು ಖರೀದಿಸಿ ನಗರಕ್ಕೆ ತಂದು ೧೦ ಸಾವಿರ ರೂಪಾಯಿಗೆ ಒಂದು ಶೀಷೆಯಂತೆ ಮಾರುತ್ತಿದ್ದು,ಆರೋಪಿಗಳಿಂದ ಸುಮಾರು ೨೫ ವಯಲ್ ರೆಮ್ಡಿಸಿವಿರ್ ಚುಚ್ಚುಮದ್ದುನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಸಂಜೀವ್ ಕುಮಾರ್ ರೆಮ್ಡಿಸಿವಿರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಯಿತು.
ವಿಚಾರಣೆಯಲ್ಲಿ ಆತ ನೀಡಿದ ಮಾಹಿತಿಯನ್ನು ಆಧರಿಸಿ ಉಳಿದಿಬ್ಬರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದರು.
ಕೋವಿಡ್ ಎರಡನೇ ಅಲೆ ಪ್ರಾರಂಭವಾದ ಬಳಿಕ ರೆಮ್ಡಿಸಿವಿರ್ ಔಷಧಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾಳ ಸಂತೆ ದಂಧೆಕೋರರು ಹೆಚ್ಚಿನ ಬೆಲೆಗೆ ಜೀವ ರಕ್ಷಕ ಔಷಧಿಯನ್ನು ಮಾರುತ್ತಿದ್ದಾರೆ. ಇಂತಹ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ರಾಜ್ಯಾದ್ಯಂತ ಹಲವು ಮಂದಿಯನ್ನು ಬಂಧಿಸಲಾಗಿದೆ.