ರೆಮಿಡಿಸಿವಿಯರ್ ಇಂಜೆಕ್ಷನ್‍ಗಳ ಅಕ್ರಮ ಮಾರಾಟ:ಮೂವರ ಬಂಧನ

ಕಲಬುರಗಿ.ಏ.23: ಕೋವಿಡ್-19ಗೆ ಸಂಬಂಧಿಸಿದಂತೆ ರೆಮಿಡಿಸಿವಿಯರ್ ಇಂಜೆಕ್ಷನ್‍ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರದಲ್ಲಿ ಪೋಲಿಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಜೇವರ್ಗಿ ತಾಲ್ಲೂಕಿನ ಯಾಳವಾರ್ ಗ್ರಾಮದ ನಿವಾಸಿ ಮತ್ತು ಡೈಗ್ನೋಸ್ಟಿಕ್ ಮತ್ತು ಅಥರ್ವ ಚೆಸ್ಟ್ ಕ್ಲಿನಿಕ್‍ಗಳಲ್ಲಿ ಎಕ್ಸರೇ ಟೆಕ್ನಿಷಿಯನ್ ಸಿಬ್ಬಂದಿ ಭೀಮಾಶಂಕರ್ ತಂದೆ ಮಲ್ಲಪ್ಪ ಅರಬೋಳ್ (27), ಅಫಜಲಪುರ ತಾಲ್ಲೂಕಿನ ಅಂಕಲಗಾ ಗ್ರಾಮದ ನಿವಾಸಿ ಮತ್ತು ಸಿದ್ದಗಂಗಾ ಮೆಡಿಕಲ್ ಸಿಬ್ಬಂದಿ ಲಕ್ಷ್ಮೀಕಾಂತ್ ತಂದೆ ಚನ್ನಪ್ಪ ಮೂಲಗೆ (20) ಹಾಗೂ ಖಮರ್ ಕಾಲೋನಿ ನಿವಾಸಿ ಮತ್ತು ಸ್ಟಾಪ್ ನರ್ಸ್ ಆಗಿರುವ ಜಿಲಾನಿಖಾನ್ ತಂದೆ ಖಾಜಾಖಾನ್ (32) ಎಂದು ಗುರುತಿಸಲಾಗಿದೆ.
ಬಂಧಿತರಾದ ಲಕ್ಷ್ಮೀಕಾಂತ್ ಮೂಲಗೆಯಿಂದ 12 ರೆಮಿಡಿಸಿವಿಯರ್ ಇಂಜೆಕ್ಷನ್ ಹಾಗೂ ಎರಡು ಮೊಬೈಲ್‍ಗಳನ್ನು ಮತ್ತು ಜಿಲಾನಿಖಾನ್‍ನಿಂದ ಎರಡು ರೆಮಿಡಿಸಿವಿಯರ್ ಇಂಜೆಕ್ಷನ್ ಹಾಗೂ ಒಂದು ಮೊಬೈಲ್‍ನ್ನು ಪೋಲಿಸರು ವಶಪಡಿಸಿಕೊಂಡರು.
ಬಂಧಿತರು ಬೆಳಗಾವಿ ಹಾಗೂ ಬೆಂಗಳೂರು ನಗರಗಳಲ್ಲಿ ವಾಸವಾಗಿರುವ ತಮ್ಮ ಪರಿಚಯಸ್ಥರಿಂದ ರೆಮಿಡಿಸಿವಿಯರ್ ಇಂಜಕ್ಷನ್‍ಗಳನ್ನು ಅಕ್ರಮವಾಗಿ ಖರೀದಿಸಿ ಖಾಸಗಿ ಬಸ್‍ಗಳ ಮೂಲಕ ತರಿಸಿಕೊಂಡು ನಗರದಲ್ಲಿ ಅಕ್ರಮವಾಗಿ ಕೋವಿಡ್-19 ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಒಂದು ರೆಮಿಡಿಸಿವಿಯರ್ ಇಂಜೆಕ್ಷನ್‍ಗೆ 25000ರೂ.ಗಳಂತೆ ಅತೀ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಖಚಿತ ಭಾತ್ಮಿ ಮೇರೆಗೆ ಪೋಲಿಸರು ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಖಚಿತ ಭಾತ್ಮಿ ಮೇರೆಗೆ ಎ ಉಪ ವಿಭಾಗದ ಎಸಿಪಿ ಅಂಶುಕುಮಾರ್ ಅವರ ನೇತೃತ್ವದಲ್ಲಿ ಪಿಎಸ್‍ಐ ವಾಹೀದ್ ಕೋತ್ವಾಲ್, ಎಎಸ್‍ಐ ಹುಸೇನ್ ಭಾಷಾ, ಸಿಬ್ಬಂದಿಗಳಾದ ತೌಸಿಫ್, ಶಿವಾನಂದ್, ಈರಣ್ಣ, ರಾಜು, ಫರತಾಬಾದ್, ಪಿಐ ಕಪಿಲ್‍ದೇವ್ ಹಾಗೂ ಸಿಬ್ಬಂದಿಯವರು ಕಾರ್ಯಾಚರಣೆ ಮಾಡಿ, ನಗರದ ಬಿಗ್ ಬಜಾರ್ ಹತ್ತಿರ ಭೀಮಾಶಂಕರ್ ಹಾಗೂ ಲಕ್ಷ್ಮೀಕಾಂತ್ ಅವರನ್ನು ಹಾಗೂ ಎಸ್‍ಟಿಬಿಟಿ ಕ್ರಾಸ್ ಹತ್ತಿರ ಜಿಲಾನಿಖಾನ್ ಅವರನ್ನು ಬಂಧಿಸಿದರು. ಈ ಕುರಿತು ಬ್ರಹ್ಮಪೂರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.