ರೆಮಿಡಿಸಿವಿಯರ್ ಇಂಜಿಕ್ಷನ್‍ ಸರಬರಾಜು ಮಾಡದೇ, ಕೇಂದ್ರ ಸರ್ಕಾರ ತಾರತಮ್ಯ ಎಸಗುತ್ತಿದೆಃ ಶಾಸಕ ಎಂ.ಬಿ ಪಾಟೀಲ್

ವಿಜಯಪುರ, ಎ.30-ಕರ್ನಾಟಕದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ರೋಗಿಗಳ ಸಂಖ್ಯೆಗೆ ಅನುಗುಣವಾಗಿ ರೆಮಿಡಿಸಿವಿಯರ್ ಇಂಜಿಕ್ಷನ್‍ನನ್ನು ಸರಬರಾಜು ಮಾಡದೇ, ಕೇಂದ್ರ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ಮಾಜಿ ಸಚಿವ, ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.
ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ವೈದ್ಯರ ಸಭೆ ನಡೆಸಿ, ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಪರಿಶೀಲಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಇಂದು 40ಸಾವಿರ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಛತ್ತೀಸಗಡ ರಾಜ್ಯದಲ್ಲಿ 15ಸಾವಿರ, ಗುಜರಾತ್ ರಾಜ್ಯದಲ್ಲಿ ಇಂದು 14ಸಾವಿರ ಕೊರೊನಾ ರೋಗಿಗಳು ಇಂದು ದಾಖಲಾಗಿದ್ದಾರೆ. ಆದರೆ ಕೇಂದ್ರ ಸರ್ಕಾರ ರೆಮಿಡಿಸಿವಿಯರ್ ಪೂರೈಕೆಯಲ್ಲಿ ದಿ.21 ರಿಂದ ಎಪ್ರಿಲ್30ರವರೆಗೆ 10ದಿನಗಳ ಅವಧಿಗೆ ಗುಜರಾತ್ ರಾಜ್ಯಕ್ಕೆ 1,63,559 ಹಾಗೂ ಛತ್ತೀಸಗಡ ರಾಜ್ಯಕ್ಕೆ 48,250 ಇಂಜಕ್ಷನ್‍ಗಳನ್ನು ಹಂಚಿಕೆ ಮಾಡಲಾಗಿದ್ದು, ಆದರೆ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಿರುವ ಕರ್ನಾಟಕಕ್ಕೆ ಕೇವಲ 25,352 ಇಂಜಕ್ಷನ್‍ಗಳನ್ನು ಮಾತ್ರ ಹಂಚಿಕೆ ನೀಡಲಾಗಿದೆ. ಈ ಅಂಕಿ-ಅಂಶಗಳನ್ನು ನೋಡಲಾಗಿ ರೆಮಿಡಿಸಿವಿಯರ್ ಹಂಚಿಕೆ, ಪೂರೈಕೆ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಪಾರದರ್ಶಕವಾಗಿಲ್ಲ ಎಂಬುದು ಮೇಲ್ನೊಟಕ್ಕೆ ಕಂಡುಬರುತ್ತಿದೆ. ಕಾರಣ ಮಾನ್ಯ ಪ್ರಧಾನಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಿ, ಈ ತಾರತಮ್ಯ ನಿವಾರಣೆ ಮಾಡಿ, ಬಳಲುತ್ತಿರುವ ರೋಗಿಗಳಿಗೆ ಔಷಧ ನೀಡಲು ಈ ಕೂಡಲೇ ನೆರವಾಗಬೇಕು ಎಂದು ಎಂ.ಬಿ.ಪಾಟೀಲ್ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಧಾನಿಗಳಿಗೆ, ಕೇಂದ್ರ ಆರೋಗ್ಯ ಸಚಿವರಿಗೆ, ರಾಜ್ಯದ ಮುಖ್ಯಮಂತ್ರಿಗಳಿಗೆ, ಆರೋಗ್ಯ ಸಚಿವರಿಗೆ ಟ್ವೀಟ್ ಮೂಲಕ ಗಮನ ಸೆಳೆಯಲಾಗುವುದು ಎಂದರು.
ಅತೀ ಕಡಿಮೆ ಶುಲ್ಕ ಪಡೆದು ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಬಿ.ಎಲ್.ಡಿ.ಇ ಆಸ್ಪತ್ರೆಗೆ ನಿನ್ನೆ 382 ಇಂಜಕ್ಷನ್‍ಗಳು ಬಂದಿದ್ದು, ನಿನ್ನೆಯೇ ಖಾಲಿಯಾಗಿವೆ. ಇಂದು 482 ಇಂಜಕ್ಷನ್‍ಗಳು ಬಂದಿದ್ದು, ಆದರೆ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಇಂಜಕ್ಷನ್ ನೀಡಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಬಿ.ಎಲ್.ಡಿ.ಇ ಆಸತ್ರೆಯಲ್ಲಿ ಹೆಚ್ಚುತ್ತಿರುವ ರೋಗಿಗಳಿಗೆ ಆಕ್ಸಿಜನ್ ಪೂರೈಸಲು ಈಗೀರುವ 13ಕೆ.ಎಲ್ ಸಾಮಾರ್ಥ್ಯದ ಆಕ್ಸಿಜನ್ ಘಟಕದ ಜೊತೆಗೆ ಹೆಚ್ಚುವರಿಯಾಗಿ ಇನ್ನೂ 13ಕೆ.ಎಲ್. ಆಕ್ಸಿಜನ್ ಘಟಕವನ್ನು ಸ್ಥಾಪಿಸಲು ಇಂದಿನ ಸಭೆಯಲ್ಲಿ ನಿರ್ಣಯಸಲಾಗಿದ್ದು, ಮುಂದಿನ 15ದಿನಗಳಲ್ಲಿ ಈ ಘಟಕವನ್ನು ಸ್ಥಾಪಿಸಲು ಯುದ್ದೋಪಾದಿಯಲ್ಲಿ ಕೆಲಸ ಮಾಡಿ, ಆಕ್ಸಿಜನ್ ಬೆಡ್‍ಗಳ ಕೊರತೆ ನಿವಾರಿಸಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದರು. ಮತ್ತು ತುರ್ತಾಗಿ 100ಜಂಬೋ ಆಕ್ಸಿಜನ್ ಸಿಲೆಂಡರ್‍ಗಳನ್ನು ಈಗಾಗಲೇ ತರಿಸಲಾಗಿದ್ದು, ಅವುಗಳು ಕೂಡ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.
ಆಸ್ಪತ್ರೆಗೆ ನಿತ್ಯವೂ ಹೆಚ್ಚಿನ ರೋಗಿಗಳು ದಾಖಲಾಗಲು ಬರುತ್ತಿರುವ ಹಿನ್ನೆಯಲ್ಲಿ ಕೇವಲ ಅಗತ್ಯವಿರುವವರಿಗೆ ಮಾತ್ರ ಒಳರೋಗಿಯಾಗಿ ದಾಖಲೆ ಮಾಡಬೇಕು. ಮನೆಯಲ್ಲಿಯೇ ಆರೈಕೆಯಾಗುವವರನ್ನು ಆಸ್ಪತ್ರೆಗೆ ದಾಖಲಿಸಬಾರದು. ಇದರಿಂದ ಬೆಡ್‍ಗಳ ಕೊರತೆ ನಿಗಿಸಿ, ಅಗತ್ಯವಿರುವ ರೋಗಿಗಳಿಗೆ ಅನುಕೂಲವಾಗುವುದು. ದಾಖಲಾಗುವ ಒಳರೋಗಿಗಳಲ್ಲಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದ ನಂತರ ಅವರನ್ನು ದೀರ್ಘಾವಧಿವರೆಗೆ ಆಸ್ಪತ್ರೆಯಲ್ಲಿ ಅನಗತ್ಯವಾಗಿ ಇರಿಸದೇ, ಡಿಸ್ಚಾರ್ಜ್ ಮಾಡಬೇಕು ಎಂದು ಇಂದಿನ ಸಭೆಯಲ್ಲಿ ಎಂ.ಬಿ.ಪಾಟೀಲ್ ಸೂಚಿಸಿದರು.
ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ರೋಗಿಗಗಳ ಚಿಕಿತ್ಸೆಗೆ ಅನಕೂಲವಾಗಲು ಬಿ.ಎಲ್.ಡಿ.ಇ ಸಂಸ್ಥೆ ನರ್ಸಿಂಗ್ ಹಾಗೂ ಫಾರ್ಮಸಿ ಕಾಲೇಜಿನ ನುರಿತ ಸಿಬ್ಬಂದಿ, ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಯಿತು.
ಗುಣಮುಖರಾಗುತ್ತಿರುವ ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಫೀಜಿಯೋಥೆರಪಿ ಸೌಲಭ್ಯವನ್ನು ಆಸ್ಪತ್ರೆಯಲ್ಲಿ ಒದಗಿಸಲಾಗುತ್ತಿದ್ದು, ಇದರಿಂದ ಉತ್ತಮ ಫಲಿತಾಂಶ ಕಂಡುಬಂದಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಸಭೆಯಲ್ಲಿ ಬಿ.ಎಲ್.ಡಿ.ಇ ವಿವಿ ಸಮಕುಲಪತಿ ಡಾ.ಆರ್.ಎಸ್.ಮುಧೋಳ, ಬಿ.ಎಂ.ಪಾಟೀಲ್ ಪಾಟೀಲ್ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಆಸ್ಪತ್ರೆ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ರಿಜಿಸ್ಟಾರ್ ಡಾ.ಜೆ.ಜಿ.ಅಂಬೇಕರ್, ಸಂಸ್ಥೆ ಆಡಳಿತಾಧಿಕಾರಿ ಡಾ.ರಾಘವೇಂದ್ರ ಕುಲಕರ್ಣಿ, ಪ್ರಚಾರಾಧಿಕಾರಿ ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.