ರೆಡ್ ಕ್ರಾಸ್ ಸಂಸ್ಥೆಯ ಭವನದಲ್ಲಿ ಕಣ್ಣಿನ ಆಸ್ಪತ್ರೆ ಆರಂಭಿಸಿ : ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ

ಚಾಮರಾಜನಗರ, ನ.13:- ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಭವನದಲ್ಲಿ ಕಣ್ಣಿನ ಆಸ್ಪತ್ರೆಯನ್ನು ತೆರೆಯುವ ಮೂಲಕ ಜಿಲ್ಲೆಯ ಜನರಿಗೆ ನೆರವಾಗಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ಅವರು ಸಲಹೆ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಕಾರಿಣಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ರೆಡ್ ಕ್ರಾಸ್ ಸಂಸ್ಥೆ ತನ್ನ ಕಾರ್ಯ ಚಟುವಟಿಕೆಗಳಿಗೆ ಅನುವಾಗುವಂತೆ ಶತಮಾನೋತ್ಸವ ಭವನ ನಿರ್ಮಾಣ ಮಾಡಲು ಅನುದಾನ ನಿಗದಿಯಾಗಿದೆ. ಈ ಶತಮಾನೋತ್ಸವ ಭವನವು ರೆಡ್‍ಕ್ರಾಸ್‍ನ ನಿಗದಿತ ಕಾರ್ಯ ಚಟುವಟಿಕೆಗಳ ಜೊತೆ ಕಣ್ಣಿನ ಆಸ್ಪತ್ರೆಗೂ ಅವಕಾಶ ಮಾಡಿಕೊಡುವುದರಿಂದ ಜಿಲ್ಲಾ ಜನರಿಗೆ ಆರೋಗ್ಯ ಸಂಬಂಧಿ ಸಹಾಯ ಮಾಡಿದಂತಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಪ್ರತ್ಯೇಕ ಕಣ್ಣಿನ ಆಸ್ಪತ್ರೆ ಇಲ್ಲ. ಕಣ್ಣಿನ ಚಿಕಿತ್ಸೆಗೆ ಜಿಲ್ಲೆಯ ಜನರು ಬೇರೆ ಜಿಲ್ಲೆಗಳನ್ನು ಅವಲಂಭಿಸಿದ್ದಾರೆ. ಹೀಗಾಗಿ ನಿರ್ಮಾಣಗೊಳ್ಳಲಿರುವ ರೆಡ್‍ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಭವನದ ಒಂದು ಭಾಗದಲ್ಲಿ ಕಣ್ಣಿನ ಆಸ್ಪತ್ರೆ ತೆರೆಯಬೇಕಿದೆ. ಇದು ಮಹತ್ಕಾರ್ಯವು ಆಗಿರುವುದರಿಂದ ಭವನ ಕಟ್ಟಡದ ನಕ್ಷೆ ಹಾಗೂ ಅಂದಾಜು ಪಟ್ಟಿ ಪ್ರಸ್ತಾವನೆಯಲ್ಲಿ ಮಾರ್ಪಾಡುಗಳೊಂದಿಗೆ ಮುಂದಿನ ಅಗತ್ಯ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಶತಮಾನೋತ್ಸವ ಭವನದಲ್ಲಿ ಆರೋಗ್ಯ ಸಂಬಂಧಿ ಸಹಾಯ ಚಟುವಟಿಕೆಗಳಿಗೂ ಹೆಚ್ಚು ಅವಕಾಶ ಇರಬೇಕು. ಸಮಾಜಮುಖಿ ಸೇವಾ ಕಾರ್ಯಗಳು ನಿರಂತರವಾಗಿ ಮುಂದುವರೆಯಬೇಕು. ಪ್ರಥಮ ಚಿಕಿತ್ಸೆ ಸೇರಿದಂತೆ ಹಲವಾರು ತರಬೇತಿ ಕಾರ್ಯಕ್ರಮಗಳು ಆಯೋಜನೆ ಮಾಡಬೇಕು ಎಂದರು.
ರಕ್ತ ಸಂಗ್ರಹಣಾದಂತಹ ಅಮೂಲ್ಯ ಕಾರ್ಯಕ್ಕಾಗಿ ಶಿಬಿರಗಳನ್ನು ಆಯೋಜನೆ ಮಾಡಬೇಕು. ವಿವಿಧ ಇಲಾಖೆಗಳ ಸಹಕಾರ ಪಡೆದು ಅಶಕ್ತರಿಗೆ ಅಗತ್ಯವಾದ ನೆರವು ಮತ್ತು ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ. ರವಿ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಮಹೇಶ್, ಆರ್.ಸಿ.ಹೆಚ್. ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಜಿಲ್ಲಾ ಸರ್ಜನ್ ಡಾ. ಮುರಳೀ ಕೃಷ್ಣ, ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಾದ ಡಾ. ಗಿರೀಶ್ ಪಟೇಲ್, ಡಾ. ಗಾಯತ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಬಿ. ಬಸವರಾಜು ಇತರರು ಸಭೆಯಲ್ಲಿ ಹಾಜರಿದ್ದರು.