ರೆಡ್ ಕ್ರಾಸ್ ಪರೀಕ್ಷೆ: 30 ವಿದ್ಯಾರ್ಥಿಗಳು ತೇರ್ಗಡೆ

ಬೀದರ್:ಮಾ.6: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಡೆಸಲಾದ ರೆಡ್ ಕ್ರಾಸ್ ಜ್ಯೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆಯಾದ 30 ವಿದ್ಯಾರ್ಥಿಗಳಿಗೆ ಇಲ್ಲಿಯ ಕುಂಬಾರವಾಡದ ನವೀನ್ ಪಬ್ಲಿಕ್ ಸ್ಕೂಲನಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು.
ಜ. 6 ರಂದು ನಡೆಸಿದ್ದ ಪರೀಕ್ಷೆಗೆ ಶಾಲೆಯ 30 ವಿದ್ಯಾರ್ಥಿಗಳು ಹಾಜರಾಗಿದ್ದರು. ಒಬ್ಬರು ಅಗ್ರಶ್ರೇಣಿ ಹಾಗೂ 29 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ವಿದ್ಯಾ ಪಾಟೀಲ ಹೇಳಿದರು.
ರೆಡ್ ಕ್ರಾಸ್ ಸಂಸ್ಥೆಯ ಸೇವಾ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವ ಭಾಗವಾಗಿ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆ ನಿರಂತರ ಸಾಮಾಜಿಕ ಕಾರ್ಯಗಳಲ್ಲಿ ನಿರತವಾಗಿದೆ ಎಂದು ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ಮಾತನಾಡಿ, ರೆಡಕ್ರಾಸ್ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಯುದ್ಧ ಕಾಲದಲ್ಲಿ ಯುದ್ಧದಿಂದ ಪ್ರಭಾವಿತರಾದವರಿಗೆ ಚಿಕಿತ್ಸೆ ನೀಡುವ ಹಕ್ಕು ಹೊಂದಿದೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಆಕ್ಸಿಮೀಟರ್, ಸ್ಯಾನಿಟೈಸರ್, ಮಾಸ್ಕಗಳನ್ನು ಉಚಿತವಾಗಿ ವಿತರಿಸಿ ಜನರಿಗೆ ನೆರವಾಗಿದೆ. ನೋಬಲ್ ಶಾಂತಿ ಪುರಸ್ಕಾರಕ್ಕೆ ಪಾತ್ರವಾಗಿದೆ ಎಂದು ತಿಳಿಸಿದರು.
ನವೀನ್ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ಶೀಲಾ ಚಿಕ್ಕಬಸೆ, ಆಡಳಿತಾಧಿಕಾರಿ ಸುನಿತಾ ರಾಮಶೆಟ್ಟಿ ಇದ್ದರು.