ರೆಡ್‍ಕ್ರಾಸ್ ವತಿಯಿಂದ ಕೋವಿಡ್ ರೋಗಿಗಳಿಗೆ ಆಪ್ತ ಸಮಾಲೋಚನೆ

ಬಳ್ಳಾರಿ, ಮೇ 28: ನಗರದ ವಿಮ್ಸ್ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂಸೇವಕರು ಹಾಗೂ ತರಬೇತುದಾರರು ಗುರುವಾರ ಕೋವಿಡ್ ರೋಗಿಗಳಿಗೆ ಮಾನಸಿಕ ಆಪ್ತ ಸಮಾಲೋಚನೆ ನಡೆಸಿದರು.
ಆಕ್ಸಿಜನ್ ಕಾನ್ಸಂಟ್ರೇಟರ್ ಬಳಸುವುದು ಮತ್ತು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದರ ಕುರಿತು ಕಿರುನಾಟಕ ನಡೆಸಿ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಕೋವಿಡ್ ರೋಗಿಗಳ ಆರೋಗ್ಯ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಕೋವಿಡ್ ರೋಗಿಗಳ ಜತೆ ಆಪ್ತ ಸಮಾಲೋಚನೆ ನಡೆಸಿದರು.
ಕೋವಿಡ್‍ನಿಂದಾಗಿ ಮಾನಸಿಕವಾಗಿ ಕುಗ್ಗಿರುವಂತಹ ರೋಗಿಗಳಿಗೆ ಧೈರ್ಯ ತುಂಬಲು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕರ್ತರು ಕಿರುನಾಟಕ ಮತ್ತು ರಸಮಂಜರಿ ಕಾರ್ಯಕ್ರಮಗಳೊಂದಿಗೆ ರೋಗಿಗಳ ಮನರಂಜಿಸಿದರು. ಟ್ರಾಮಾಕೇರ್ ಸೆಂಟರ್‍ನಲ್ಲಿ ಹೆಚ್ಚಾಗಿ ಯುವಕರಿದ್ದು, ಕೋವಿಡ್ ಬಗ್ಗೆ ಅವರಲ್ಲಿರುವ ಭಯವನ್ನು ಹೋಗಲಾಡಿಸಿ, ಧೈರ್ಯದಿಂದ ಇರುವಂತೆ ಆಪ್ತಸಮಾಲೋಚನೆ ನಡೆಸಿದರು. ಕೋವಿಡ್ ಸಮಯದಲ್ಲಿ ರೋಗದ ಬಗ್ಗೆ ಗಾಬರಿಯಾಗುವುದನ್ನು ಬಿಟ್ಟು ರೋಗದಿಂದ ಗೆದ್ದು ಬರಲು ಮಾಡಬೇಕಾದ ಕೆಲಸಗಳನ್ನು ಕುರಿತು ಮಾನಸಿಕ ಧೈರ್ಯವನ್ನು ತುಂಬಿದರು. ಈ ಸಂದರ್ಭದಲ್ಲಿ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್, ಸರ್ವ್ ತರಬೇತುದಾರರಾದ ನಿಸಾರ್ ಅಹಮದ್, ಬಿ.ಹರಿ ಶಂಕರ್ ಅಗರ್ವಾಲ್, ವಿ.ಉಮಾ ಮಹೇಶ್ವರಿ ಮತ್ತು ವಿಷ್ಣು ಕುಮಾರ್ ಹಾಗೂ ಇತರರು ಇದ್ದರು.