ರೆಡ್ಡಿ ಪಕ್ಷಕ್ಕೆ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿ ಗೋನಾಳ್ ರಾಜಶೇಖರಗೌಡ ನೇಮಕ


ಬಳ್ಳಾರಿ ಜ 17 : ಬಿಜೆಪಿಗೆ ಸಡ್ಡು ಹೊಡೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿರುವ ಮಾಡಿರುವ ಮಾಜಿ ಸಚಿವ ಜನಾರ್ಧನರೆಡ್ಡಿ ಜಿಲ್ಲೆಯಲ್ಲಿ ನಿಧಾನವಾಗಿ ಬಿಜೆಪಿಗೆ ಒಂದೊಂದಾಗಿ ಏಟು ನೀಡುತ್ತಾ ಹೊರಟಿದ್ದು. ಇಂದು ಲಿಂಗಾಯತ ಸಮುದಾಯದ ಮುಖಂಡ, ವೀರಶೈವ ವಿದ್ಯಾವರ್ಧಕ ಸಂಘದ ಖಜಾಂಚಿ ಗೋನಾಳ್ ರಾಜಶೇಖರಗೌಡ ಅವರನ್ನು ಪಕ್ಷದ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

ರಾಜಶೇಖರ ಅವರು ಈ ಹಿಂದೆ ಜನಾರ್ಧನರೆಡ್ಡಿ, ಸಚಿವ ಆನಂದ್ ಸಿಂಗ್ ಮತ್ತಿತರ ಗುಂಪಿನೊಂದಿಗೆ ಅದಿರು ಸಾಗಾಣಿಕೆ ಮೊದಲಾದ ವ್ಯವಹಾರದಲ್ಲಿ ತೊಡಗಿ ಶ್ರೀಮಂತರಾದವರು. ನಂತರ ಮೋಕಾ ಜಿಪಂ ಸದಸ್ಯರಾಗಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಸಚಿವ ಶ್ರೀರಾಮುಲು ಅವರು ಬಿಎಸ್ ಆರ್ ಪಕ್ಷ ಕಟ್ಟಿದ್ದಾಗ ಕುಷ್ಟಗಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ನಂತರ ಕಳೆದ ಜಿಪಂ ಚುನಾವಣೆಯಲ್ಲಿ ಕೊರ್ಲಗುಂದಿಯಲ್ಲಿ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ ಭರತ್ ರೆಡ್ಡಿ ಅವರ ವಿರುದ್ದ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋಲುಕಂಡಿದ್ದರು. ಜಿಲ್ಲೆಯ ಬಿಜೆಪಿ ವಲಯದಿಂದ ದೂರವಾಗಿದ್ದರೂ, ಸಚಿವ ವಿ. ಸೋಮಣ್ಣ ಅವರ ಆಪ್ತರಾಗಿ ರಾಜ್ಯ ಬಿಜೆಪಿ ಸಮಿತಿಯಲ್ಲಿ ಸದಸ್ಯರಾಗಿದ್ದರು.

ಜನಾರ್ದನ ರೆಡ್ಡಿ ಜಿಲ್ಲೆಯ ಬಿಜೆಪಿ ಒಬ್ಬೊಬ್ಬ ಮುಖಂಡರಿಗೆ ಗಾಳ ಹಾಕುತ್ತ ಈಗ ಗೋನಾಳ್ ರಾಜಶೇಖರಗೌಡ ಅವರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ.

ಬಿಜೆಪಿಯಲ್ಲಿ ಜಿಲ್ಲಾಧ್ಯರಾಗಿರುವವರು ಲಿಂಗಾಯತ ಸಮುದಾಯದ, ಗೋನಾಳ್ ಗ್ರಾಮದ ಮುರಹರಗೌಡ ಅವರು. ಅದೇ ಗ್ರಾಮದ, ಅವರ ಸಂಬಂಧಿಕರೇ ಆಗಿರುವ ಗೋನಾಳ್ ರಾಜಶೇಖರ ಅವರನ್ನು ಕೆಆರ್ ಪಿಪಿ ಪಕ್ಷದ ಮುಖಂಡರನ್ನಾಗಿ ನೇಮಕ ಮಾಡಿ ರೆಡ್ಡಿ ಬಿಜೆಪಿಗೆ ಸಖತ್ ಸಡ್ಡು ಹೊಡೆದಿದ್ದಾರೆ ಎನ್ನಬಹುದು. ಇದರಿಂದ ಗ್ರಾಮಿಣ ಕ್ಷೇತ್ರದಲ್ಲಿ ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಕೆಲ ದಿನಗಳಲ್ಲಿ ಮತ್ತಷ್ಟು ಬದಲಾವಣೆ ಜಿಲ್ಲೆಯಲ್ಲಿ ಕಾಣಬಹುದು.