
ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.02: ವಿಧಾನಸಭೆ ಕ್ಷೇತ್ರದ ಹಳ್ಳಿಗಳಿಗೆ ಗಾಲಿ ಜನಾರ್ಧನ ರೆಡ್ಡಿಯವರ ನಡೆ ಗ್ರಾಮೀಣಾಭಿವೃದ್ಧಿ ಕಡೆ ಎನ್ನುವ ಶೀರ್ಷಿಕೆಯೊಂದಿಗೆ ಪ್ರಚಾರದ ಪ್ರವಾಸ ಹಮ್ಮಿಕೊಂಡಿದ್ದು, ಗಂಗಾವತಿ ವಿಧಾನಸಭೆ ಕ್ಷೇತ್ರದ ಮುಕ್ಕುಂಪಿ ಗ್ರಾಮದಲ್ಲಿ ಪ್ರಚಾರ ಪ್ರಾರಂಭ ಮಾಡಿದರು.
ಗ್ರಾಮದ ಮುಖ್ಯ ವೃತ್ತದಲ್ಲಿ ಇರುವ ಮಹರ್ಷಿ ವಾಲ್ಮೀಕಿ ಮತ್ತು ಕನಕದಾಸರ ಮಂಟಪಗಳಿಗೆ ಪುಷ್ಪ ಸಮರ್ಪಣೆ ಮಾಡಿ ಗ್ರಾಮ ದೈವ ಮಾರುತೇಶನ ದರ್ಶನ ಮಾಡಿ ನಂತರ ಗ್ರಾಮದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಗ್ರಾಮದಲ್ಲಿ ಎಲ್ಲಾ ಜನಾಂಗದವರು ಯಾವುದೇ ಜಾತಿ ಮತ ಧರ್ಮ ಬೇಧ ಭಾವ ಇಲ್ಲದೇ ಕೂಡಿಕೊಂಡು ಇದ್ದದ್ದು ನೋಡಿ ಸಂತಸ ವಾಯಿತು. ಗಂಗಾವತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಜಿಂದಾಲ್ ಮಾದರಿ ನಾಲ್ಕು ದೊಡ್ಡ ಮಟ್ಟದ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿ ಕ್ಷೇತ್ರದ ಪ್ರತಿಯೊಬ್ಬ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿ ಮಾಡುವದಾಗಿ ಭರವಸೆ ನೀಡಿದರು. ನಾನು ಶಾಸಕ ನಾಗಿ ಬಂದ ಮೂರು ತಿಂಗಳಲ್ಲಿ ಗ್ರಾಮದ ಮೂಲಭೂತ ಸೌಕರ್ಯಗಳನ್ನು ಸಂಪೂರ್ಣವಾಗಿ ಪೂರೈಸುವುದಾಗಿ ಹೇಳಿದರು. ಹಾಗೂ ವಿಶೇಷವಾಗಿ ಮುಕ್ಕುಂಪಿ ಕೆರೆಯ ಹೂಳೆತ್ತುವ ಕಾರ್ಯಕ್ರಮಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡುವ ಮೂಲಕ ಗ್ರಾಮದ ಅವಶ್ಯಕತೆಗಳು ಮತ್ತು ತೊಂದರೆಗಳನ್ನು ಅರಿತು ಅವುಗಳನ್ನು ಮುಂಬರುವ ದಿನಗಳಲ್ಲಿ ಶಾಶ್ವತ ಪರಿಹಾರ ನೀಡಲು ಮುಂದಾಗುತ್ತೆನೆ. ಕ್ಷೇತ್ರದ ಜನತೆಯ ಆರೋಗ್ಯ ವಿಚಾರದಲ್ಲಿ ಬಸವೇಶ್ವರ ಆರೋಗ್ಯ ಶ್ರೀ ಯೋಜನೆ ಮೂಲಕ ಪ್ರತಿಯೊಬ್ಬ ವ್ಯಕ್ತಿಗೂ ತಗಲುವ ಖರ್ಚು 1- 10 ಲಕ್ಷ ರೂಗಳ ವರೆಗೂ ಉಚಿತ ಚಿಕಿತ್ಸೆ, ರೈತರಿಗೆ ಧೈರ್ಯ ತುಂಬಲು ವಾರ್ಷಿಕ 15 ಸಾವಿರ, ಪ್ರತಿ ಗ್ರಾಮದಲ್ಲಿ ರೈತ ಭರವಸೆ ಕೇಂದ್ರ ನಿರ್ಮಾಣ ಮೂಲಕ ರೈತರಿಗೆ ದೊರಕುವ ಬೀಜ, ಗೊಬ್ಬರ, ಕೃಷಿಗೆ ಬಳಸುವ ಸಲಕರಣೆಗಳು ರೈತರ ಮನೆ ಬಾಗಿಲಿಗೆ ತಲುಪಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮನೋಹರ ಗೌಡ ಹೇರೂರು, ಗ್ರಾಮೀಣ ಮತ್ತು ನಗರ ಘಟಕದ ಅಧ್ಯಕ್ಷರು ಗಳಾದ ಡಿ ಕೆ ದುರ್ಗಪ್ಪ ಆಗೋಲಿ, ಬಲ್ಕುಂದಿ ವಿರೇಶ್ ಮತ್ತು ಮುಖಂಡರು ಗಳಾದ ಅಮರಜ್ಯೋತಿ ನರಸಪ್ಪ, ಈ ರಾಮಕೃಷ್ಣ, ಟಿಜಿ ಬಾಬು, ಕುಪ್ಪರಾಜು, ಯಮನೂರು ಚೌಡ್ಕಿ, ಶಿವು ಅಧೋನಿ, ಚಂದ್ರಶೇಖರ್ ಹಿರೂರು ಸೇರಿದಂತೆ ಅನೇಕರು ಇದ್ದರು.