ರೂಬಿಕ್ಸ್ ಕ್ಯೂಬ್: ವಿಶ್ವದಾಖಲೆ ನಿರ್ಮಿಸಿದ ಮ್ಯಾಕ್ಸ್ ಪಾರ್ಕ್

ನ್ಯೂಯಾರ್ಕ್, ಜೂ.೧೭- ಈಗಾಗಲೇ ರೂಬಿಕ್ಸ್ ಕ್ಯೂಬ್ ಆಟದ ಮೂಲಕ ಜಗತ್ತಿನ ಗಮನ ಸೆಳೆದಿರುವ ೨೧ರ ಹರೆಯದ ಅಮೆರಿಕಾದ ಮ್ಯಾಕ್ಸ್ ಪಾರ್ಕ್ ಇದೀಗ ವಿಶ್ವದಾಖಲೆ ನಿರ್ಮಿಸಿದ್ದಾರೆ. ಯುಎಸ್‌ನಲ್ಲಿ ನಡೆದ ಪ್ರೈಡ್ ಇನ್ ಲಾಂಗ್ ಬೀಚ್ ೨೦೨೩ ಸ್ಪರ್ಧೆಯಲ್ಲಿ ೩೩೩ ಸುತ್ತಿನ ರೂಬಿಕ್ ಕ್ಯೂಬ್ ಅನ್ನು ಕೇವಲ ೩.೧೩ ಸೆಕೆಂಡ್‌ಗಳಲ್ಲಿ ಪರಿಹರಿಸುವ ಮೂಲಕ ಪಾರ್ಕ್ ಗಿನ್ನೆಸ್ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.
೨೦೧೮ರಲ್ಲಿ ಚೀನಾದ ಯುಷೆಂಗ್ ಎಂಬಾತ ೩೩೩ ಸುತ್ತಿನ ರೂಬಿಕ್ಸ್ ಕ್ಯೂಬ್ ಅನ್ನು ೩.೪೭ ಸೆಕೆಂಡ್‌ಗಳಲ್ಲಿ ಪರಿಹರಿಸಿದ ದಾಖಲೆ ಹೊಂದಿದ್ದು, ಇಲ್ಲಿಯ ವರೆಗೆ ಇದೇ ವಿಶ್ವದಾಖಲೆ ಹೊಂದಿತ್ತು. ಇದೀಗ ಯುಷೆಂಗ್ ಹೆಸರಲ್ಲಿದ್ದ ಈ ಅಪೂರ್ವ ದಾಖಲೆಯನ್ನು ಪಾರ್ಕ್ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಅಲ್ಲದೆ ಈ ಸಾಧನೆ ಮೂಲಕ ಪಾರ್ಕ್ ತನ್ನ ವೈಯಕ್ತಿಕ ದಾಖಲೆಯನ್ನು ಕೂಡ ಉತ್ತಮಪಡಿಸಿಕೊಂಡರು. ಇಲ್ಲಿಯ ವರೆಗೆ ಪಾರ್ಕ್ ೩.೬೩ ಸೆಕೆಂಡ್‌ನಲ್ಲಿ ರೂಬಿಕ್ ಕ್ಯೂಬ್ ಪರಿಹರಿಸಿದ ದಾಖಲೆ ಹೊಂದಿದ್ದರು. ಇದೀಗ ಕೇವಲ ೩.೧೩ ಸೆಕೆಂಡ್‌ಗಳಲ್ಲಿ ಪರಿಹರಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾರ್ಕ್ ತಂದೆ, ದಾಖಲೆ ನಿರ್ಮಿಸಿದ ಸಮಯವು ವಿದ್ಯುತ್ ಸಂಚಾರದಂತೆ ಇದ್ದು, ಬಹುಷಃ ಎಲ್ಲರಿಗೂ ಅಚ್ಚರಿ ಮೂಡಿಸಿದೆ ಎಂದು ಭಾವಿಸುತ್ತೇನೆ. ಕ್ಯೂಬಿಂಗ್ ಪ್ರಪಂಚವು ಭಾವಪರವಶತೆಗೆ ಕಡಿಮೆಯಿಲ್ಲ. ಆ ದಾಖಲೆಯನ್ನು ಯಾರು ಮುರಿಯುತ್ತಾರೆ ಎಂಬುದನ್ನು ನೋಡಲು ಎಲ್ಲರೂ ನಿಜವಾಗಿಯೂ ಕಾಯುತ್ತಿದ್ದರು. ಮ್ಯಾಕ್ಸ್ ದಾಖಲೆ ನಿರ್ಮಿಸಿದಾಗ ಪ್ರತಿಯೊಬ್ಬರೂ ಅವನಿಗೆ ತುಂಬಾ ಸಂತೋಷಪಟ್ಟರು ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.