ರೂಪಾರಿಗೆ ಮಾನಸಿಕ ತೊಂದರೆ ರೋಹಿಣಿ ಪತಿ ಕಿಡಿ

ಬೆಂಗಳೂರು, ಫೆ. ೨೦- ಐಪಿಎಸ್ ಅಧಿಕಾರಿ ರೂಪಾ ಅವರಿಗೆ ಮಾನಸಿಕ ತೊಂದರೆ ಇರಬಹುದು. ಹಾಗಾಗಿ ಅವರು ರೋಹಿಣಿ ಸಿಂಧೂರಿಯವರ ಬಗ್ಗೆ ಮಾತನಾಡುತ್ತಿದ್ದಾರೆ. ರೂಪಾ ಅವರಿಗೆ ಸರ್ಕಾರದ ಹುಚ್ಚು ಇದೆ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಪಿಎಸ್ ಅಧಿಕಾರಿ ರೂಪಾ ಅವರಿಗೆ ನನ್ನ ಪತ್ನಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಅಸೂಯೆ ಇದೆ. ರೂಪಾ ಅವರಿಗಿಂತ ೧೦ ವರ್ಷ ಜೂನಿಯರ್ ಆದ ರೋಹಿಣಿ ಸಿಂಧೂರಿಯವರು ಹೆಸರು ಮಾಡಿರುವುದು ಅವರಿಗೆ ಸಹಿಸಲಾಗುತ್ತಿಲ್ಲ. ಹಾಗಾಗಿ ಅವರ ವಿರುದ್ದ ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಐಪಿಎಸ್ ಅಧಿಕಾರಿ ರೂಪಾ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರ ಪತಿ ಎಂದು ಹೇಳಿ ನಾನು ಎಲ್ಲೂ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ನಾನೂ ಕರ್ನಾಟಕದಲ್ಲೇ ಹುಟ್ಟಿರುವುದು. ನಮ್ಮ ತಂದೆ ನೂರಾರು ಎಕರೆ ಲೇಔಟ್ ಮಾಡಿದ್ದಾರೆ. ನಮ್ಮದು ಗೌರವಯುತ ಕುಟುಂಬ ಎಂದು ಅವರು ಹೇಳಿದರು.
ತೀರಿ ಹೋಗಿರುವ ಐಎಎಸ್ ಅಧಿಕಾರಿ ಡಿ.ಕೆ. ರವಿ ಯವರ ಬಗ್ಗೆ ಮಾತನಾಡಬಾರದು. ಆ ಸಂದರ್ಭದಲ್ಲಿ ನಾವು ಕಷ್ಟಪಟ್ಟಿದ್ದೇವೆ. ಡಿ.ಕೆ. ರವಿಯವರ ಬಗ್ಗೆ ಈಗ ಮಾತನಾಡುವುದು ಬೇಡ ಎಂದರು.
ನನ್ನ ಪತ್ನಿ ರೋಹಿಣಿ ಸಿಂಧೂರಿ ಐಎಎಸ್ ಅಧಿಕಾರಿಗಳಿಗೆ ಫೋಟೋ ಕಳುಹಿಸಿದ್ದಾರೆ ಎಂದು ರೂಪಾ ಹೇಳಿದ್ದಾರೆ. ಆ ಐಎಎಸ್ ಅಧಿಕಾರಿಗಳು ಯಾರು ಎಂಬುದನ್ನು ಇವರು ಹೇಳಲಿ. ನಾವು ಯಾರಿಗೂ ಫೋಟೋ ಶೇರ್ ಮಾಡಿಲ್ಲ. ಸ್ಟೇಟಸ್‌ನಲ್ಲಿ ಹಾಕಿರುವ ಫೋಟೋಗಳನ್ನು ವೈರಲ್ ಮಾಡಿದ್ದಾರೆ ಎಂದು ದೂರಿದರು.

ಪೊಲೀಸರಿಗೆ ದೂರು
ಐಎಎಸ್ ಅಧಿಕಾರಿಯಾಗಿರುವ ನನ್ನ ಪತ್ನಿ ರೋಹಿಣಿ ಸಿಂಧೂರಿ ಅವರ ಮೊಬೈಲ್ ಅನ್ನು ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ ಎಲ್ಲಾ ವೈಯಕ್ತಿಕ ಫೋಟೋಗಳನ್ನು ಐಜಿಪಿ ಡಿ. ರೂಪಾ ಅವರು ಕಳವು ಮಾಡಿದ್ದಾರೆ ಎಂದು ಪತಿ ಸುಧೀರ್ ರೆಡ್ಡಿ ಅವರು ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರೋಹಿಣಿ ಸಿಂಧೂರಿ ಅವರ ಮೊಬೈಲ್ ಅನ್ನು ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ ಎಲ್ಲ ವೈಯಕ್ತಿಕ ಫೋಟೋಗಳನ್ನು ಕಳವು ಮಾಡಿರುವ ಐಜಿಪಿ ಡಿ. ರೂಪಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ನನ್ನ ಪತ್ನಿ ರೋಹಿಣಿ ಸಿಂಧೂರಿ ಅವರ ಮೊಬೈಲ್ ಅನ್ನು ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ ಎಲ್ಲ ವೈಯಕ್ತಿಕ ಫೋಟೋಗಳನ್ನು ಕದಿಯಲಾಗಿದೆ. ಈ ಬಗ್ಗೆ ರೂಪಾ ಅವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ರೂಪಾ ಯಾರು:
ರೋಹಿಣಿ ಸಿಂಧೂರಿಗೆ ಯಾವುದೇ ಪ್ರಚಾರ ಬೇಡ. ಯಾವ್ಯಾವ ಅಧಿಕಾರಿಗಳಿಗೆ ಫೋಟೋ ಕಳುಹಿಸಿದ್ದಾರೆ ಮೊದಲು ಹೇಳಿ. ನಾನು ಹುಟ್ಟಿದ್ದು ಇಲ್ಲೇ, ನಾನು ಕನ್ನಡಿಗ. ಆಂಧ್ರಪ್ರದೇಶದಲ್ಲಿ ನಮ್ಮ ಸಂಬಂಧಿಕರು ಯಾರೂ ಇಲ್ಲ. ನಮ್ಮ ಕುಟುಂಬದ ಎಲ್ಲರೂ ಇಲ್ಲೇ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.