ರೂಪಾಗೆ ತಡೆ ಹೈಕೋರ್ಟ್ ತೆರವು

ಬೆಂಗಳೂರು,ಏ.೧೧- ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಜಿಪಿಯಾಗಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಮಾತನಾಡದಂತೆ ವಿಧಿಸಲಾಗಿದ್ದ ತಡೆಯನ್ನು ತೆರವುಗೊಳಿಸಲಾಗಿದೆ.
ಕಳೆದೆರಡು ತಿಂಗಳ ಹಿಂದೆ ಇಬ್ಬರು ಉನ್ನತ ಮಹಿಳಾ ಅಧಿಕಾರಿಗಳ ನಡುವಿನ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ವಿರುದ್ಧ ಮಾತನಾಡದಂತೆ ರೂಪಾಗೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು.ಇದನ್ನು ರೂಪಾ ಪ್ರಶ್ನಿಸಿದ್ದ ಹಿನ್ನಲೆಯಲ್ಲಿ ನ್ಯಾಯಾಲಯ ಪ್ರತಿಬಂಧಕಾಜ್ಞೆಯನ್ನು ತೆರವುಗೊಳಿಸಿದೆ.
ಈ ಹಿಂದೆ ರೋಹಿಣಿ ಸಿಂಧೂರಿ ವಿರುದ್ಧ ರೂಪಾ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ದೂರು ಸಲ್ಲಿಸಿದ್ದರು. ರೋಹಿಣಿ ವಿರುದ್ಧ ಇರುವ ಆರೋಪ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ವೇಳೆ ರೂಪಾ ಅವರಿಂದ ವೈಯಕ್ತಿಕ ಮಟ್ಟದಲ್ಲಿ ವಾಗ್ದಾಳಿಗೆ ತುತ್ತಾಗಿದ್ದ ರೋಹಿಣಿಗೆ ಕೋರ್ಟ್ ಮೂಲಕ ಬಿಗ್ ರಿಲೀಫ್ ಸಿಕ್ಕಿತ್ತು.
ರೂಪಾಗೆ ಸೋಷಿಯಲ್ ಮೀಡಿಯಾ ಸೇರಿದಂತೆ ಯಾವುದೇ ರೀತಿಯ ಮಾಧ್ಯಮಗಳಲ್ಲಿ ರೋಹಿಣಿ ವಿರುದ್ಧ ಮಾನಹಾನಿಕರ ಹೇಳಿಕೆ, ಬರಹಗಳನ್ನು ಪೋಸ್ಟ್ ಮಾಡದಂತೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ವಿಧಿಸಿತ್ತು.