ರೂಪಾಂತರ ಸೋಂಕು ಪತ್ತೆಗೆ ಕಣ್ಗಾವಲು

ನವದೆಹಲಿ, ಡಿ.೨೭- ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಅದನ್ನು ಪತ್ತೆ ಹಚ್ಚುವ ಮತ್ತು ಕಣ್ಗಾವಲಿಡುವ ಕುರಿತಂತೆ ಕೋವಿಡ್ ರಾಷ್ಟ್ರೀಯ ಕಾರ್ಯಪಡೆ ಸುದೀರ್ಘ ಸಮಾಲೋಚನೆ ನಡೆಸಿದೆ.

ಭಾರತದಲ್ಲಿ ರೂಪಾಂತರ ಕೊರೊನಾ ವೈರಸ್ ಕಾಣಿಸಿಕೊಂಡರೆ ಅದರ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ, ವಿವಿಧ ವಿಷಯಗಳ ಕುರಿತು ಸುಧೀರ್ಘವಾಗಿ ಚರ್ಚೆ ನಡೆಸಿ ಅದರ ತಡೆಗೆ ಅನುಸರಿಸಬೇಕಾದ ಮಾರ್ಗಗಳ ರೂಪರೇಷೆ ಸಿದ್ಧಪಡಿಸಲು ನಿರತವಾಗಿದೆ.

ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದಿರುವ ಜನರಲ್ಲಿ ಸೋಂಕು ಪತ್ತೆಗಾಗಿ ದೇಶಾದ್ಯಂತ ೫೦ಕ್ಕೂ ಹೆಚ್ಚು ಜನರ ಮಾದರಿ ಸಂಗ್ರಹ ಮಾಡಲಾಗಿದೆ. ದೇಶಾದ್ಯಂತ ಹಲವು ಪ್ರಯೋಗಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಇಂಗ್ಲೆಂಡ್‌ನಿಂದ ಬಂದವರಲ್ಲಿ ರೂಪಾಂತರ ಸೋಂಕು ಇದೆಯೇ, ಇಲ್ಲವೇ ಎನ್ನುವುದನ್ನು ಪರೀಕ್ಷೆಯ ಬಳಿಕ ಪತ್ತೆಮಾಡಲು ಜಿಲ್ಲಾ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ಇಂಗ್ಲೆಂಡ್‌ನಿಂದ ಬಂದವರಲ್ಲಿ ರೂಪಾಂತರ ಸೋಂಕು ಒಂದು ವೇಳೆ ಕಂಡುಬಂದರೆ ಅದರ ತಡೆಗೆ ಅನುಸರಿಸಬೇಕಾದ ಕ್ರಮಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಕುರಿತಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಇಂಗ್ಲೆಂಡ್‌ನಿಂದ ದೇಶಕ್ಕೆ ಬಂದಿರುವ ಎಲ್ಲಾ ಜನರನ್ನು ಕಡ್ಡಾಯವಾಗಿ ತಪಾಸಣೆ ನಡೆಸುವಂತೆ ಆಯಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ರೂಪಾಂತರ ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಸೋಂಕು ಹರಡದಂತೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.
ರೂಪಾಂತರ ಕೊರೊನಾವನ್ನು ಹರಡುವುದನ್ನು ತಡೆಯಲು ಸಾಂಕ್ರಾಮಿಕ ರೋಗಗಳ ಕಣ್ಗಾವಲಿಗೆ ಕೇಂದ್ರ ಕೇಂದ್ರ ಸರ್ಕಾರ ಮುಂದಾಗಿದೆ.
ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಖಗವಸು ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ, ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾರ್ಯಪಡೆ ಜನರಿಗೆ ಸೂಚಿಸಿದೆ.