
ಬಳ್ಳಾರಿ, ಮೇ 20: ತಾಲೂಕಿನ ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ನಿಮ್ಮ ಬಿ.ಪಿಯನ್ನು ಖಚಿತವಾಗಿ ಪರೀಕ್ಷಿಸಿಕೊಳ್ಳಿ, ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಮತ್ತು ಧೀರ್ಘಕಾಲ ಜೀವಿಸಿ’ ಎಂಬ ಘೋಷ ವಾಕ್ಯದೊಂದಿಗೆ ಗುರುವಾರದಂದು ವಿಶ್ವ ರಕ್ತದೊತ್ತಡ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆಯುಷ್ ವೈದ್ಯಾಧಿಕಾರಿ ಡಾ.ನಾರಾಯಣ ಬಾಬು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯಾವುದೇ ಕಾಯಿಲೆಗಳು ಬರಲು ಅಧಿಕ ರಕ್ತದೊತ್ತಡ ಕಾರಣವಾಗಿರುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುವವರು ತಲೆ ಸುತ್ತುವುದು, ವಿಪರೀತ ಬೆವರುವುದು, ಉಸಿರಾಟದ ತೊಂದರೆ, ವಾಂತಿ, ವಾಕರಿಕೆ, ಮಸುಕಾದ ದೃಷ್ಟಿ, ದೃಷ್ಟಿ ಬದಲಾವಣೆ, ಆತಂಕ ಗೊಂದಲ, ಇನ್ನು ಮುಂತಾದ ಲಕ್ಷಣಗಳು ಮನುಷ್ಯರಲ್ಲಿ ಕಂಡುಬರುತ್ತವೆ. ಆದ್ದರಿಂದ ಕಾಲ ಕಾಲಕ್ಕೆ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಬಿ.ಪಿ ಪರೀಕ್ಷಿಸಿಕೊಳ್ಳಬೇಕು ಹಾಗೂ ಔಷಧ ಸೇವಿಸುವ ಮೂಲಕ ಬಿ.ಪಿ ಯನ್ನು ನಿಯಮಿತವಾಗಿಟ್ಟುಕೊಂಡು ಆರೋಗ್ಯದಿಂದಿರಬೇಕು ಎಂದು ಹೇಳಿದರು.
ಎನ್.ಸಿ.ಡಿ ಆಪ್ತ ಸಮಾಲೋಚಕ ಅನಿಲ್ ಕುಮಾರ್ ಅವರು ಮಾತನಾಡಿ, ಇಂದು ಹಲವರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಅಧಿಕ ರಕ್ತದೊತ್ತಡ ಕೂಡ ಒಂದು. ಜೀವನ ಶೈಲಿಯ ವ್ಯತ್ಯಾಸವು ಕೂಡ ಕಾರಣವಾಗಬಹುದು. ಈ ಸಮಸ್ಯೆಗೆ ಜಾಗೃತಿ ಮೂಡಿಸುವ ಉದೇಶದಿಂದ ಪ್ರತೀ ವರ್ಷ ಮೇ 17 ರಂದು ವಿಶ್ವ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೇಕರ್, ದಂತ ತಜ್ಞೆ ಡಾ.ಪ್ರಿಯಾಂಕ ರೆಡ್ಡಿ, ಕಚೇರಿ ಅಧೀಕ್ಷಕಿ ಶಿಲ್ಪ ಸೇರಿದಂತೆ ಎನ್.ಸಿ.ಡಿ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
One attachment • Scanned by Gmail