ರೂಪದರ್ಶಿ ಮೇಲೆ ಪ್ರಿಯಕರ, ಸ್ನೇಹಿತನ ಅತ್ಯಾಚಾರ

ಬೆಂಗಳೂರು,ಏ.10-ಅಮಲೇರಿಸುವ ಜ್ಯೂಸ್ ಕುಡಿಸಿ ರೂಪದರ್ಶಿಯೊಬ್ಬಳನ್ನು ಪ್ರಿಯತಮ ಮತ್ತು ಆತನ ಸ್ನೇಹಿತ ಅತ್ಯಾಚಾರ ಮಾಡಿರುವ ಘಟನೆ ಯಶವಂತಪುರದಲ್ಲಿ‌ ತಡವಾಗಿ ಬೆಳಕಿಗೆ ಬಂದಿದೆ.
ರೂಪದರ್ಶಿಯಾಗಿದ್ದ ಯುವತಿಯನ್ನು ಪ್ರಮೋದ್ ಎಂಬಾತ ಹಿಂಬಾಲಿಸಿ ಪ್ರೀತಿಸುವುದಾಗಿ ಪೀಡಿಸುತ್ತಿದ್ದ. ಫೇಸ್​ಬುಕ್​ ಮೂಲಕ ಸಂಪರ್ಕಿಸಿ ಯುವತಿಯ ನಂಬರ್ ಪಡೆದು ನಿರಂತರವಾಗಿ ಮಾತನಾಡುತ್ತಿದ್ದು ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು.
ಒಂದು ದಿನ ನಿನ್ನೊಂದಿಗೆ ಮಾತನಾಡಬೇಕು ಎಂದು ಪ್ರಮೋದ್ ಯುವತಿಯನ್ನು ಯಶವಂತಪುರದ ಲಾಡ್ಜ್‌ಗೆ ಕರೆಸಿಕೊಂಡಿದ್ದಾನೆ. ಬಳಿಕ ಜ್ಯೂಸ್‌ನಲ್ಲಿ ಮತ್ತು ಬರುವ ಪುಡಿ ಸೇರಿಸಿ ಕೊಟ್ಟಿದ್ದಾನೆ. ನಂತರ ಪ್ರಮೋದ್ ಹಾಗೂ ಆತನ ಸ್ನೇಹಿತ ಧನಂಜಯ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಅತ್ಯಾಚಾರ ನಡೆಸಿದ ಆರೋಪಿಗಳು ಯುವತಿ ಜೊತೆಗಿನ ಖಾಸಗಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ಬಳಿಕ ಸಂತ್ರಸ್ತ ಯುವತಿಗೆ ಕರೆ ಮಾಡಿ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಕರೆಸಿಕೊಂಡು 18 ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ನೊಂದ ಯುವತಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳಾದ ಪ್ರಮೋದ್ ಹಾಗೂ ಧನಂಜಯ್​ ಬಂಧನಕ್ಕೆ ಪೊಲೀಸರು ಈಗ ಬಲೆ ಬೀಸಿದ್ದಾರೆ.