ರುಸ್ಮಾ ಒಕ್ಕೂಟ ರಾಜ್ಯ ಮಟ್ಟದ ಸಂಸ್ಥೆಯಾಗಿ ಹೊರಹೊಮ್ಮಲಿದೆ

ರಾಯಚೂರು,ಆ.೪- ರುಸ್ಮಾ ಒಕ್ಕೂಟ ರಾಜ್ಯ ಮಟ್ಟದ ಸಂಸ್ಥೆಯಾಗಿ ಹೊರಹೊಮ್ಮಲಿದೆ ಎಂದು ರಾಜ್ಯಧ್ಯಕ್ಷ ರಾಜಾ ಶ್ರೀನಿವಾಸ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಯಚೂರಿನ ಖಾಸಗಿ ಶಾಲಾ ಕಾಲೇಜುಗಳ ವಿವಿಧ ಸಮಸ್ಯೆಗಳಾದ ಕನ್ನಡ ಮತ್ತು ಇಂಗ್ಲೀಷ್ ಭಾಷಾ ಸಮಸ್ಯೆ ಸರಕಾರದಿಂದ ಸರಬರಾಜಾಗುತ್ತಿರುವ ಪುಸ್ತಕ ವಿತರಣ ಸಮಸ್ಯೆ, ಕಟ್ಟಡ ಸುರಕ್ಷತೆ, ಹಾಗೂ ಅಗ್ನಿ ಶಾಮಕ ಸೌಲಭ್ಯಗಳ ಸಮಸ್ಯೆ ಸರಿಯಾದ ಸಮಯಕ್ಕೆ ಆರ್.ಟಿ.ಇ ಶುಲ್ಕ ಮಂಜೂರಾತಿ ಸಮಸ್ಯೆ ೩೭೧ ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಸ್ಥಳೀಯ ಮಟ್ಟದ ಬಿಇಓ ಮತ್ತು ಉಪನಿರ್ದೇಶಕರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆಗುತ್ತಿರುವ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಸುಮಾರು ೧೫ ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿರುವ ರುಸ್ಮಾ (ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ) ರಾಜ್ಯ ಒಕ್ಕೂಟವಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಈಗಿನ ಸರಕಾರ ಎನ್.ಇ.ಪಿ ಗೊಂದಲ ನಿವಾರಿಸಬೇಕು. ಆರ್.ಟಿ.ಇ.ಶುಲ್ಕದ ಸ್ಪಷ್ಟನೆ ನೀಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರವೇ ಹಲವು ನಿಯಮಗಳನ್ನು ಹೇರುವ ಕುರಿತು ಸ್ಪಷ್ಟನೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ತೆರಿಗೆ ವಿಧಿಸುವ ಕುರಿತು ಸ್ಪಷ್ಟನೆ ಕೊಡಬೇಕೆಂದು ಹೇಳಿದರು.