ರುದ್ರೇಶ್ ಹತ್ಯೆ ಎನ್‌ಐಎ ತೀವ್ರ ಶೋಧ

ಬೆಂಗಳೂರು,ಮೇ.೩-ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್‌ಎಸ್ ) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇನ್ನೂ ಪತ್ತೆಯಾಗಿಲ್ಲ.
೨೦೧೬ ರಲ್ಲಿ ನಡೆದ ಕೊಲೆಗೆ ಸಂಚು ರೂಪಿಸಿದ್ದ ಆರೋಪಿ ಅಸೀಂ ಷರೀಫ್ ನನ್ನು ರಾಷ್ಟ್ರೀಯ ತನಿಖಾ ತಂಡ( ಎನ್‌ಐಎ) ಅಧಿಕಾರಿಗಳು ತೀವ್ರ ಶೋಧ ಕೈಗೊಂಡಿದ್ದಾರೆ.
ಎನ್‌ಐಎ ತನಿಖೆ ವೇಳೆ ಅಸೀಂ ಷರೀಫ್ ಮಾಡಿದ್ದ ಕೊಲೆ ಸಂಚು ಬಯಲಾಗಿದ್ದು ಎಷ್ಟು ಹುಡುಕಿದರೂ ರುದ್ರೇಶ್ ಕೊಲೆ ಆರೋಪಿ ಸಿಗುತ್ತಿಲ್ಲ.
ಆರೋಪಿ ಅಸೀಂ ಷರೀಫ್, ಕೊಲೆ ಮಾಡುವುದರಿಂದ ಹಿಡಿದು ಆರೋಪಿಗಳು ತಪ್ಪಿಸಿಕೊಂಡು ಹೋಗುವ ತನಕವೂ ಪ್ಲ್ಯಾನ್ ಮಾಡಿದ್ದಾನೆ ಎನ್ನಲಾಗಿದ್ದು ಈತ ನಿಷೇಧಿತ ಪಿಎಫ್‌ಐ ಸಂಘಟನೆಯ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದ. ೨೦೧೬ ರಿಂದಲೂ ಎನ್‌ಐಎ ಅಸೀಂ ಷರೀಫ್ ಗಾಗಿ ಹುಡುಕಾಟ ನಡೆಸಲಾಗಿದೆ.
ಇಡೀ ದೇಶಾದ್ಯಂತ ಪಿಎಫ್‌ಐ ಮುಖಂಡರ ಮನೆಗಳ ದಾಳಿ ಮಾಡಿದಾಗಲೂ ಇಲ್ಲ ಈತನ ಸುಳಿವು ಸಿಕ್ಕಿರಲಿಲ್ಲ. ಸದ್ಯ ಸುಮಾರು ೫೦ಕ್ಕೂ ಹೆಚ್ಚು ಪಿಎಫ್‌ಐ ಮುಖಂಡರನ್ನು ಎನ್‌ಐಎ ವಿಚಾರಣೆ ಮಾಡುತ್ತಿದೆ. ಈ ವೇಳೆ ಗೌಸ್ ನಿಯಾಜಿ ಎನ್ನುವ ವ್ಯಕ್ತಿ ಜತೆ ಅಸೀಂ ಷರೀಫ್ ಸಂಪರ್ಕದಲ್ಲಿ ಇರುವುದು ಪತ್ತೆಯಾಗಿದೆ.
ಈ ಗೌಸ್ ನಿಯಾಜಿ ಸಹ ಪಿಎಫ್‌ಐ ಸಂಘಟನೆಯ ಸಕ್ರೀಯ ಕಾರ್ಯಕರ್ತ. ಆದರೆ ಪಿಎಫ್‌ಐ ಮುಖಂಡರ ಮನೆಗಳ ಮೇಲೆ ದಾಳಿ ವೇಳೆ ಗೌಸ್ ನಿಯಾಜಿ ನಾಪತ್ತೆಯಾಗಿದ್ದ. ಹೀಗಾಗಿ ಸದ್ಯ ಅಸೀಂ ಷರೀಫ್ ಜತೆಗೆ ಗೌಸ್ ನಿಯಾಜಿಗಾಗಿಯೂ ಎನ್‌ಐಎ ಹುಡುಕಾಟ ನಡೆಸುತ್ತಿದೆ.
ಇದೀಗ ಎನ್‌ಐಎ ಗೌಸ್ ನಿಯಾಜಿ ಪತ್ತೆಗೆ ಲುಕ್ ಔಟ್ ನೊಟೀಸ್ ಜಾರಿ ಮಾಡಿದ್ದು ಆರೋಪಿ ಸುಳಿವು ಕೊಟ್ಟವರಿಗೆ ೫ ಲಕ್ಷ ಬಹುಮಾನ ಘೋಷಿಸಿದೆ. ಗೌಸ್ ನಿಯಾಜಿ ಸಿಕ್ಕರೆ ಆಸೀಂ ಷರೀಫ್ ಪತ್ತೆ ಆಗಲಿದ್ದಾನೆ ಎಂದು ಎನ್‌ಐಎ ಅಂದಾಜಿಸಿದೆ.
ಜಾಮೀನು ಭಾಗ್ಯ:
ಏಳು ವರ್ಷಗಳಿಂದ ಜಾಮೀನಿಗಾಗಿ ರುದ್ರೇಶ್ ಕೊಲೆ ಆರೋಪಿಗಳು ಕಾಯುತ್ತಿದ್ದು ಈಗ ಮತ್ತೆ ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಹೀಗಾಗಿ ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ.