ರುದ್ರಭೂಮಿಯನ್ನು ಅಭಿವೃದ್ಧಿಪಡಿಸುವಂತೆ  ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.24: ನಗರದ ಎಸ್.ಹೆಚ್.132 ಸಂಗನಕಲ್ಲು ರಸ್ತೆ ಇಲ್ಲಿ ಇರುವ ರುದ್ರಭೂಮಿಯು ಹದಗೆಟ್ಟಿದೆ. ಈ ರುದ್ರಭೂಮಿಯನ್ನು ಬಳ್ಳಾರಿ ನಗರ ವಾಸಿಗಳಾದ ಸತ್ಯನಾರಾಯಣ ಪೇಟೆ, ಗಾಂಧಿನಗರ ಇನ್ನು ಮುಂತಾದ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಇರುವ ಸಾರ್ವಜನಿಕರು ಇದನ್ನು ಬಳಸುತ್ತಾರೆ. ಕೂಡಲೇ ಈ ರುದ್ರಭೂಮಿಯನ್ನು ಅಭಿವೃದ್ಧಿ ಪಡಿಸುವಂತೆ ಯುವಸೇನಾ ಸೋಶಿಯಲ್ ಯ್ಯಾಕ್ಷನ್ ಕ್ಲಬ್ ಮನವಿ ಮಾಡಿದೆ. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಸುಮಾರು 5 ವರ್ಷಗಳಲ್ಲಿ ಆಗಿನ ಜಿಲ್ಲಾಧಿಕಾರಿಗಳಾದ ಶ್ರೀರಾಮ್ ಪ್ರಸಾದ್ ಮನೋಹರ ರವರು ಯುವ ಸೇನೆ ಮನವಿ ಪತ್ರವನ್ನು ನೀಡಿದಾಗ ಸ್ಪಂಧಿಸಿ, ಹೈದರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ) ಅನುದಾನದ ಅಡಿಯಲ್ಲಿ ಹದಗೆಟ್ಟಿದ ರುದ್ರಭೂಮಿಯನ್ನು ಸರಿಪಡಿಸಿ, ಒಳಗಡೆ ಸಿಮೆಂಟ್ ರಸ್ತೆಯನ್ನು ಹಾಕಿ, ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಿ, ರಸ್ತೆಯ ಎರಡು ಬದಿಗಳಲ್ಲಿ ಗಿಡಗಳನ್ನು ಬೆಳೆಸಿ ಬರ್ನರ್ (ಹೆಣ ಸುಡುವ)ಕಟ್ಟಡವನ್ನು ನಿರ್ಮಿಸಿದ್ದರು. ಮತ್ತೆ ಹೈದರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ) ಅನುದಾನವು 2ನೇ ಬಾರಿ ಬಿಡುಗಡೆ ಮಾಡುವಷ್ಟರಲ್ಲಿ ವರ್ಗಾವಣೆಯಾದರು.
 ಇನ್ನು ಮೂಲಭೂತ ಸೌಕರ್ಯಗಳಾದ ಶೌಚಾಲಯಗಳು, ಸ್ನಾನಗೃಹಗಳು, ದೇವಾಲಯ, ನೀರಿನ ವ್ಯವಸ್ಥೆ ಮತ್ತು ಬರ್ನರ್ ಮಿಷನ್(ಹೆಣ ಸುಡುವ ಪರಿಕರ)ನ್ನು ಇವು ಎಲ್ಲವೂ ಕುಂದು-ಕೊರತೆಗಳಾಗಿ ಉಳಿದಿವೆ. ಅಷ್ಟೇ ಅಲ್ಲದೇ ರುದ್ರಭೂಮಿಯಲ್ಲಿ ಕಸ ಮತ್ತು ಮುಳ್ಳಿನ ಗಿಡಗಳಿಂದ ತುಂಬಿಕೊಂಡು ಹೋಗಿದೆ. ಹಾಗೂ ಅಲ್ಲಿರುವ ಸುತ್ತ-ಮುತ್ತಲಿನ ಆಸ್ಪತ್ರೆಯವರು ಹಾಕಿರುವ ವೈದ್ಯಕೀಯ ಕಸದ ಪರಿಕರಗಳು ಮತ್ತು ರುದ್ರಭೂಮಿಯ ತುಂಬಾ ಬೆಳೆದಿರುವ ಮುಳ್ಳಿನ ಗಿಡಗಳನ್ನು ಸ್ವಚ್ಛ ಮಾಡಿಸಿ ಹಾಗೂ ಮೂರು ವಿದ್ಯುತ್ ಕಂಬಗಳಿದ್ದು, ಇನ್ನಷ್ಟು ವಿದ್ಯುತ್ ಕಂಬಗಳನ್ನು ಹಾಕಿ, ವಿದ್ಯುತ್ ದೀಪಗಳನ್ನು ಅಳವಡಿಸಿ ಹಾಗೂ ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸಿ, ಇನ್ನು ಮುಂತಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಯುವಸೇನಾ ಸೋಶಿಯಲ್ ಯ್ಯಾಕ್ಷನ್ ಕ್ಲಬ್ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಎಸ್.ಕೃಷ್ಣ, ಜಿ.ಎಂ. ಭಾಷ, ಉಪ್ಪಾರ ಮಲ್ಲಪ್ಪ, ಸಲಾವುದ್ದೀನ್.ಎಸ್.ಆರ್. ಎಂ.ಕೆ.ಜಗನ್ನಾಥ, ಪಿ.ನಾರಾಯಣ, ಶಿವಾನಂದ, ತೇಜುಪಾಟೀಲ್, ಕೆ.ವೆಂಕಟೇಶ, ಎಂ. ಅಭಿಷೇಕ್ ಮತ್ತು ಇತರರು ಇದ್ದರು.