ರುದ್ರಭೂಮಿಗೆ ಐದು ಎಕರೆ ಜಾಗ ನೀಡಿ

ದೇವದುರ್ಗ.ಮಾ.೨೩-ತಾಲೂಕಿನ ಮಸರಕಲ್ ಗ್ರಾಮದಲ್ಲಿ ಸಾರ್ವಜನಿಕ ರುದ್ರಭೂಮಿಗೆ ಐದು ಎಕರೆ ಜಾಗ ನೀಡುವಂತೆ ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧದಲ್ಲಿ ತಹಸಿಲ್ ಕಚೇರಿಯ ಕೇಂದ್ರ ಸ್ಥಾನಿಕ ಅಧಿಕಾರಿಗೆ ಮಸರಕಲ್ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಗುರುವಾರ ಮನವಿ ಸಲ್ಲಿಸಿದರು.
ಮಸರಕಲ್ ದೊಡ್ಡ ಗ್ರಾಮವಾಗಿದ್ದು, ಸುಮಾರು ೬೫೦೦ಮತದಾರರು, ೯ಸಾವಿರ ಜನಸಂಖ್ಯೆಯಿದೆ. ಗ್ರಾಪಂ, ಜಿಪಂ ಹಾಗೂ ತಾಪಂ ಕ್ಷೇತ್ರವಿದ್ದರೂ ಸಾರ್ವಜನಿಕರ ರುದ್ರಭೂಮಿಯಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಕೇವಲ ೫ಗುಂಟೆ ಜಾಗವಿದ್ದು, ಅಲ್ಲದೇ ಬಡವರು, ನಿರ್ಗತಿಕರು ಮೃತಪಟ್ಟರೆ ಹೂಳಲಾಗುತ್ತಿದೆ. ಉಳ್ಳವರು ತಮ್ಮ ತಮ್ಮ ಹೊಲಗಳಲ್ಲೇ ಅಂತ್ಯಸಂಸ್ಕಾರ ಮಾಡುವ ಸ್ಥಿತಿಯಿದೆ.
ಗ್ರಾಮಕ್ಕೆ ಐದು ಎಕರೆ ಜಾಗ ನೀಡುವಂತೆ ತಹಸೀಲ್ದಾರ್, ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಗೂ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಇದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದ್ದು, ನಮ್ಮ ಸಮಸ್ಯೆ ಅಧಿಕಾರಿಗಳ ಕಿವಿಗೆ ಬೀಳುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಮದ ಸರ್ವೇ ನಂ. ೨೪೪, ೨೪೫, ೨೪೬, ೨೪೭ರಲ್ಲಿ ಸುಮಾರು ೧೨ಎಕರೆ ಜಾಗ ಲಭ್ಯವಿದೆ. ಅದರಲ್ಲಿ ಆಶ್ರಯ ಕಾಲನಿ ಆರಂಭಿಸಿದ್ದು, ಉಳಿದ ಐದು ಎಕರೆ ಜಾಗವನ್ನು ರುದ್ರಭೂಮಿಗೆ ಮಂಜೂರು ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ, ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಗ್ರಾಪಂ ಸದಸ್ಯ ಬಸವರಾಜ ಗಚ್ಚಿನಮನಿ, ಲಿಂಗಪ್ಪ ಕಟಕಾರ, ಹನುಮಂತ, ರೆಡ್ಡೆಪ್ಪ, ಕೆ.ಶಿವಾನಂದ, ಮಲ್ಲಪ್ಪ, ನಬಿಸಾಬ್, ಶಿವರಾಜ, ಹಾಜಿಸಾಬ್, ಇಸ್ಮಾಯಿಲ್ ಇತರರಿದ್ದರು.