ರುಡ್‌ಸೆಟ್ ಸಂಸ್ಥೆ: ಆಡಳಿತ ವಿಭಾಗದ ನೂತನ ಕಟ್ಟಡ ಉದ್ಘಾಟನೆ

ಉಜಿರೆ, ನ.೧೩- ಕೆನರಾ ಬ್ಯಾಂಕ್‌ನಲಿ ಸಂಪೂರ್ಣವಾಗಿ ಆಧುನಿಕ ತಂತ್ರಜ್ಞಾನ ಬಳಸಿದ್ದು ಸಿಂಡಿಕೇಟ್ ಬ್ಯಾಂಕ್‌ನ ಗ್ರಾಹಕರು ಯಾವುದೇ ಕೆನರಾ ಬ್ಯಾಂಕ್ ಶಾಖೆಗೆ ಹೋಗಿ ತಮ್ಮ ವ್ಯವಹಾರ ನಡೆಸಬಹುದು ಎಂದು ಕೆನರಾ ಬ್ಯಾಂಕ್‌ನ ಆಡಳಿತ ನಿರ್ದೇಶಕಿ ಎ. ಮಣಿಮೇಖಲಾಯಿ ಹೇಳಿದರು.

ಅವರು ಗುರುವಾರ ಉಜಿರೆಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರಗಳ ಆಡಳಿತ ವಿಭಾಗದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ನಿರ್ದೇಶನದಂತೆ ವಿವಿಧ ಯೋಜನೆಯಡಿ ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಾಲ ನೀಡುತ್ತಿದೆ. ನಿರುದ್ಯೋಗಿಗಳು ರುಡ್‌ಸೆಟ್ ಸಂಸ್ಥೆ ಸಂಸ್ಥೆಗಳ ಮೂಲಕ ತರಬೇತಿ ಪಡೆದು ಸ್ವ-ಉದ್ಯೋಗ ಪ್ರಾರಂಭಿಸಲು ಕೆನರಾ ಬ್ಯಾಂಕ್ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಶೇ. ೭೫ ರಷ್ಟು ಮಂದಿ ಸಾಲ ಮರುಪಾವತಿಸಿ ಯಶಸ್ವಿಯಾಗಿ ಸ್ವ-ಉದ್ಯೋಗ ಮಾಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಾರತದಲ್ಲಿ ಅಪಾರ ಜನಸಂಖ್ಯೆ ಎಂದೂ ಸಮಸ್ಯೆ ಆಗಲಾರದು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪ್ರತಿಭೆ, ಬುದ್ಧಿವಂತಿಕೆ ಹಾಗೂ ಸಾಮರ್ಥ್ಯ ಇರುತ್ತದೆ. ಅವರಿಗೆ ಸಕಾಲದಲ್ಲಿ ಮಾಹಿತಿ ಹಾಗೂ ತರಬೇತಿ ನೀಡಿ ಸ್ವ-ಉದ್ಯೋಗ ಮಾಡಲು ಪ್ರೇರಣೆ ನೀಡುವುದೇ ರುಡ್‌ಸೆಟ್ ಸಂಸ್ಥೆಯ ಉದ್ದೇಶವಾಗಿದೆ. ೧೯೮೨ ರಲ್ಲಿ ಉಜಿರೆಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿದ ರುಡ್‌ಸೆಟ್ ಸಂಸ್ಥೆ ಇಂದು ದೇಶದೆಲ್ಲೆಡೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಮಹಿಳೆಯರು ಕೂಡಾ ಸ್ವ-ಉದ್ಯೋಗಿಗಳಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆನರಾ ಬ್ಯಾಂಕ್‌ನ ಮಹಾಪ್ರಬಂಧಕರುಗಳಾದ ರಾಕೇಶ್ ಕಶ್ಯಪ್ ಮತ್ತು ಬಿ. ಯೋಗೀಶ್ ಆಚಾರ್ಯ, ಡಿ.ಜಿ.ಎಂ. ಸತ್ಯಮೂರ್ತಿ ಹಾಗೂ ಬಿಪುಲ್‌ಚಂದ್ರ ಶಹಾ, ರುಡ್‌ಸೆಟ್ ಸಂಸ್ಥೆಗಳ ಕೇಂದ್ರೀಯ ಆಡಳಿತ ನಿರ್ದೇಶಕ ಎಂ. ಜನಾರ್ದನ್ ಮತ್ತು ನಿರ್ದೇಶಕ ಪಿ.ಸಿ. ಹಿರೇಮಠ ಉಪಸ್ಥಿತರಿದ್ದರು.