ರುಗೋಸ್ ಬಿಳಿ ನೊಣದ ಬಾಧೆ ಅರಿವು ಅಗತ್ಯ

ಬಾಗಲಕೋಟೆ: ಮಾ26:ಇತ್ತಿಚೀನ ದಿನಗಳಲ್ಲಿ ರುಗೋಸ್ ಎಂಬ ಸುರಳಿ ಬಿಳಿನೊಣದ ಬಾಧೆಯು ಹೆಚ್ಚಾಗಿ ಕಂಡು ಬರುತ್ತಿದ್ದು, ಹೆಚ್ಚು ಸಂಖ್ಯೆಯಲ್ಲಿ ತೆಂಗು ಬೆಳೆಯನ್ನು ಬಾಧಿಸುತ್ತಿದೆ. ಈ ಕೀಟದ ಬಗ್ಗೆ ರೈತರಲ್ಲಿ ಹೆಚ್ಚು ಹೆಚ್ಚು ಅರಿವು ಮೂಡಿಸಿ ಕೀಟದ ಸಮಗ್ರ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವುದು ಅತೀ ಅವಶ್ಯಕವಾಗಿದೆ ಎಂದು ಕುಲಪತಿ ಡಾ.ಕೆ.ಎಂ.ಇಂದಿರೇಶ ತಿಳಿಸಿದರು.
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 24 ನೇ ಮಾರ್ಚ್ 2021 ರಂದು ವಿಸ್ತರಣಾ ನಿರ್ದೇಶನಾಲಯದಲ್ಲಿ ರುಗೋಸ್ ಬಿಳಿ ನೊಣದ ಬಾಧೆ ಕುರಿತ ಪ್ರಾತ್ಯಕ್ಷಿಕೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಈ ಕೀಟದ ಬಾಧೆಯನ್ನು ಹೆಚ್ಚಾಗಿ ತೆಂಗು ಬೆಳೆಯುವ ದಕ್ಷಿಣ ಕರ್ನಾಟಕದಲ್ಲಿ ಮಂಗಳೂರು, ಉಡುಪಿ, ಮೈಸೂರು, ಹಾಸನ, ಚಾಮರಾಜನಗರ, ಚಿಕ್ಕಮಂಗಳೂರು ಮತ್ತೀತರ ಕಡೆಗಳಲ್ಲಿ ಈ ಕೀಟವು ಅತೀ ವೇಗವಾಗಿ ಹರಡುತ್ತಿರುವುದು ಕಂಡು ಬರುತ್ತಿದೆ ಎಂದು ತಿಳಿಸಿದರು.
ಈ ಕೀಟಕ್ಕೆ ಕರಾವಳಿ ತೀರ ಪ್ರದೇಶದ ಹವಾಮಾನ ಅನುಕೂಲಕರವಾಗಿರುತ್ತದೆ. ತೆಂಗಿನಕಾಯಿಗಳನ್ನು ಮತ್ತು ಬಾಧೆಗೊಳಗಾದ ತೆಂಗಿನ ಸಸಿಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಾಟ ಮಾಡುವುದರಿಂದ ಈ ಕೀಟ ಅತೀ ವೇಗವಾಗಿ ಹರಡುವುದು ಕಂಡು ಬಂದಿದೆ. ಈ ನಿಮಿತ್ಯ ಉತ್ತರ ಕರ್ನಾಟಕದಲ್ಲಿಯೂ ಈ ಕೀಟದ ಬಾಧೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ತೋಟಗಾರಿಕೆ/ಕೃಷಿ ಇಲಾಖೆಗಳ ಅಧಿಕಾರಿಗಳಿಗೆ ಅರಿವು ಮತ್ತು ಬಲವರ್ಧನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರಣ ಅಧಿಕಾರಿಗಳು ರೈತರಲ್ಲಿ ಈ ಕೀಟದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೀಟಶಾಸ್ತ್ರ ವಿಭಾಗ ಸಹಾಯಕ ಪ್ರಾದ್ಯಾಪಕರಾದ ಡಾ.ಜಿ.ಎಸ್.ಚಂದ್ರಶೇಖರ ಹಾಗೂ ಡಾ.ವೆಂಕಟೇಶಲು ಕೀಟದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿದರು. ಕಾರ್ಯಕ್ರಮದಲ್ಲಿ ಸಂಯೋಜಕರಾದ ಡಾ. ಶಶಿಕುಮಾರ್.ಎಸ್., ಡಾ. ವಸೀಮ್, ಡಾ. ಕಾಂತೇಶ, ಡಾ.ಎಸ್.ಎನ್. ಪಾಟೀಲ, ಡಾ. ಉಮಾ ಅಕ್ಕಿ ಬೋಧಕೇತರ ವಿಭಾಗದವರು ಪಾಲ್ಗೊಂಡಿದ್ದರು.