ರುಂಡ-ಮುಂಡ ಬೇರ್ಪಡಿಸಿ ಯುವಕನ ಕೊಲೆ


ಬೆಂಗಳೂರು, ಏ. ೧೨- ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ರುಂಡ-ಮುಂಡ ಬೇರೆಯಾಗುವಂತೆ ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ಯಲಹಂಕದ ಶ್ರೀನಿವಾಸಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಶ್ರೀನಿವಾಸಪುರದ ರಾಘವೇಂದ್ರ (೨೮) ಕೊಲೆಯಾಗಿರುವ ದುರ್ದೈವಿ. ರಾತ್ರಿ ೭ರ ವೇಳೆ ಮನೆಯಿಂದ ಸ್ವಲ್ಪ ದೂರದಲ್ಲಿ ರಾಘವೇಂದ್ರನನ್ನು ಮಾರಕಾಸ್ತ್ರಗಳಿಂದ ರುಂಡ-ಮುಂಡ ಬೇರೆಯಾಗುವಂತೆ ಬರ್ಬರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಟೈಲ್ಸ್ ಕೆಲಸ ಮಾಡುತ್ತಿದ್ದ ರಾಘವೇಂದ್ರ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗುವಾಗ ಕೊಲೆ ಕೃತ್ಯ ನಡೆದಿದೆ. ಸಂಬಂಧಿಕರೆ ಕೊಲೆ ಮಾಡಿರುವ ಸುಳಿವೊಂದು ಪತ್ತೆಯಾಗಿದ್ದು, ಅವರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.
ಇತ್ತೀಚೆಗೆ ರಾಘವೇಂದ್ರನ ಸಂಬಂಧಿಕರೊಬ್ಬರ ಕೊಲೆಯಾಗಿದ್ದು, ಅದೇ ದ್ವೇಷದಿಂದ ಸಂಚು ರೂಪಿಸಿ ಮೂವರು ಕೊಲೆ ಕೃತ್ಯ ನಡೆಸಿದ್ದು, ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸುಳಿವು ಪತ್ತೆಯಾಗಿರುವ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಅವರು ತಿಳಿಸಿದರು.