ಮುಂಬೈ, ಏ.೩- ಕಳೆದ ೮-೯ ತಿಂಗಳುಗಳಿಂದ ನಡೆಯುತ್ತಿರುವ ಜನಪ್ರಿಯ ರಿಯಾಲಿಟಿ ಶೋ ’ಇಂಡಿಯನ್ ಐಡಲ್’ ಸೀಸನ್ ೧೩ರಲ್ಲಿ ಯುಪಿಯ ಅಯೋಧ್ಯೆಯಿಂದ ಬಂದ ರಿಷಿ ಸಿಂಗ್ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ.
ಭಾನುವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆ ನಿವಾಸಿ ರಿಷಿ ಸಿಂಗ್ ವಿಜೇತರಾದರು. ಟ್ರೋಫಿ, ೨೫ ಲಕ್ಷ ರೂ ನಗದು ಹಾಗೂ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಅವರಿಗೆ ಹೊಚ್ಚ ಹೊಸ ಕಾರನ್ನು ಉಡುಗೊರೆಯಾಗಿ ನೀಡಲಾಯಿತು.
ಇಂಡಿಯನ್ ಐಡಲ್ ಟ್ರೋಫಿ ಗೆಲ್ಲುವುದು ಪ್ರತಿಯೊಬ್ಬ ಸ್ಪರ್ಧಿಯ ಕನಸಾಗಿದ್ದು, ಈ ಬಾರಿ ರಿಷಿ ಸಿಂಗ್ ಅವರ ಕನಸು ನನಸಾಗಿದೆ. ದೇಬೋಸ್ಮಿತಾ ರಾಯ್ ದ್ವಿತೀಯ ಹಾಗೂ ಚಿರಾಗ್ ಕೊತ್ವಾಲ್ ತೃತೀಯ ಸ್ಥಾನ ಪಡೆದರು. ಬಿದಿಪ್ತ ಚಕ್ರವರ್ತಿ ನಾಲ್ಕನೇ ಸ್ಥಾನ ಪಡೆದರೆ, ಶಿವಂ ಸಿಂಗ್ ಮತ್ತು ಸೋನಾಕ್ಷಿ ಕರ್ ಐದು ಮತ್ತು ಆರನೇ ಸ್ಥಾನ ಪಡೆದರು. ನಿರ್ದೇಶಕ-ನಿರ್ಮಾಪಕ ರಾಕೇಶ್ ರೋಷನ್ ಅವರ ಮಗ ಹೃತಿಕ್ ರೋಷನ್ ಅವರ ಮುಂಬರುವ ಚಿತ್ರಕ್ಕಾಗಿ ರಿಷಿಗೆ ಹಿನ್ನೆಲೆ ಗಾಯನಕ್ಕೆ ಅವಕಾಶವನ್ನು ನೀಡಿದರು. ಭಾರತದ ಅತ್ಯುತ್ತಮ ನೃತ್ಯಗಾರ್ತಿಗಾಗಿ ಗೀತಾ ಕಪೂರ್, ಟೆರೆನ್ಸ್ ಲೂಯಿಸ್ ಭಾಗವಹಿಸಿದ್ದರು. ಹಿಮೇಶ್ ರೇಶಮಿಯಾ, ವಿಶಾಲ್ ದಾದ್ಲಾನಿ ಮತ್ತು ನೇಹಾ ಕಕ್ಕರ್ ತೀರ್ಪುಗಾರರಾಗಿದ್ದರು.
ಮೊದಲ ಮತ್ತು ಎರಡನೇ ರನ್ನರ್ ಅಪ್ ಅವರಿಗೆ ಟ್ರೋಫಿ ಮತ್ತು ತಲಾ ೫ ಲಕ್ಷ ರೂ., ಮೂರನೇ ಮತ್ತು ನಾಲ್ಕನೇ ರನ್ನರ್‌ಅಪ್‌ಗಳಾದ ಬಿದಿಪ್ತ ಚಕ್ರವರ್ತಿ ಮತ್ತು ಶಿವಂ ಸಿಂಗ್‌ಗೆ ತಲಾ ೩ ಲಕ್ಷ ರೂ., ಎಲ್ಲಾ ೬ ಫೈನಲಿಸ್ಟ್‌ಗಳು ರೂ ೧ ಲಕ್ಷದ ಚೆಕ್ ಅನ್ನು ಪಡೆದರು ಮತ್ತು ನಂತರ ಉಡುಗೊರೆಗಳನ್ನು ಪಡೆದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಿ ಸಿಂಗ್ “ನನ್ನ ಕನಸು ನನಸಾಗಿದ ಕ್ಷಣ. ಇಂತಹ ಜನಪ್ರಿಯ ಮತ್ತು ಅಪ್ರತಿಮ ಕಾರ್ಯಕ್ರಮದ ಪರಂಪರೆಯನ್ನು ಮುಂದುವರಿಸುವುದು ದೊಡ್ಡ ಗೌರವ. ಇಂತಹ ಅದ್ಭುತ ಕಾರ್ಯಕ್ರಮವನ್ನು ನಮಗೆ ನೀಡಿದ ಇಂಡಿಯನ್ ಐಡಲ್ ವಾಹಿನಿ, ತೀರ್ಪುಗಾರರು ಮತ್ತು ಇಡೀ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನ ಕನಸನ್ನು ನನಸು ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು” ಎಂದರು. ಅಲ್ಲದೇ ನಾನು ಒಂದು ದಿನ ಶೋನಲ್ಲಿ ತೀರ್ಪುಗಾರನಾಗಿ ಹಿಂತಿರುಗುವ ಮಟ್ಟಿಗೆ ಬೆಳೆಯಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.