“ರಿಯಾ” ಹಾಡು ಅನಾವರಣ

ಹಾರಾರ್, ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳ ವಿಭಿನ್ನ ಕಥಾಹಂದರದ ರಿಯಾ ಚಿತ್ರದ ಹಾಡುಗಳು ಅನಾವರಣವಾಗಿದೆ. ಚಿತ್ರಕ್ಕೆ ವಿಜಯಾ ನರೇಶ್ ನಿರ್ದೇಶನ ಮಾಡುತ್ತಿದ್ದಾರೆ.

ಈ ಮೂಲಕ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕರ ಸಾಲಿಗೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ. ಆಂದ್ರಪ್ರದೇಶದ‌ ಮೂಲದ ಮೂಲತಃ ಶಿಕ್ಷಕಿ.‌ ಉತ್ತಮ ಕಥೆ ಸಿಕ್ಕರೆ ಚಿತ್ರನಿರ್ದೇಶಿಸುವ ಆಸೆ ಹೊತ್ತಿದ್ದ ಇವರು “ರಿಯಾ” ಚಿತ್ರ ನಿರ್ದೇಶಿಸಿದ್ದಾರೆ. ತೆಲುಗು ಮಾತೃಭಾಷೆಯಾಗಿದ್ದರು ಮೊದಲ ಚಿತ್ರವನ್ನು ಕನ್ನಡದಲ್ಲಿ ನಿರ್ದೇಶಿಸಿದ್ದಾರೆ. ಪತಿ ಕನಿಗೊಂಡ ನರೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಆಡಿಷನ್ ಮೂಲಕ ಆಯ್ಕೆಯಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕ ಹಾಗೂ ನಿರ್ದೇಶಕರನ್ನು ಹೊರತುಪಡಿಸಿ ಉಳಿದ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರು ಕನ್ನಡದವರೆ ಆಗಿರುವುದು ವಿಶೇಷ.

ಇತ್ತೀಚೆಗೆ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ನೆರವೇರಿತು. ನಿರ್ದೇಶಕಿ ವಿಜಯಾ ನರೇಶ್ ” ನಿರ್ಮಾಣಕ್ಕೆ ಮುಂದಾದ ಪತಿ ಕನಿಗೊಂಡ ನರೇಶ್ ಹಾಗೂ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದರು. ಚಿತ್ರದ ನಾಯಕ ಕಾರ್ತಿಕ್ ವರ್ಣೇಕರ್ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ನಾಯಕಿ ಸಾವಿತ್ರಿ, ವಿಕಾಸ್ ಕುಲಕರ್ಣಿ, ರಣ್ವೀರ್, ಶ್ವೇತ”ರಿಯಾ” ಪಾತ್ರಧಾರಿ ಮೈಸೂರಿನ ಬಾಲಕಿ ಅನನ್ಯ ಮಾಹಿತಿ‌ಹಂಚಿಕೊಂಡರು. ಹಿರಿಯ ನಟ ಬ್ಯಾಂಕ್ ಜನಾರ್ದನ್ ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ್ರು ಪಕ್ಕದ ರಾಜ್ಯದಿಂದ ಬಂದು ಇಲ್ಲಿ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಶ್ಲಾಘಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.

ಚಿತ್ರ ಈಗಾಗಲೇ ತೆರೆಗೆ ಬರಲು ಸಿದ್ದವಾಗಿದೆ. ದುಬಾರೆ ಅರಣ್ಯದ ಬಳಿಯೇ ಹೆಚ್ಚಿನ ಚಿತ್ರೀಕರಣವಾಗಿದೆ. ಹೇಮಂತ್, ಸಮರ್ಥ್ ಚಿತ್ರಕ್ಕೆ ಸಂಗೀತ ನೀಡಿದ್ದು, ಎ.ಟಿ.ರವೀಶ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸುರೇಶ್ ಅಚ್ಚು ಛಾಯಾಗ್ರಹಣವಿದೆ.

ಕಾರ್ತಿಕ್ ವರ್ಣೇಕರ್, ಸಾವಿತ್ರಿ, ಅನನ್ಯ, ವಿಕಾಸ್, ವಿಲಾಸ್ ಕುಲಕರ್ಣಿ, ಆರ್ಗವಿ ರಾಯ್, ಸುಧೀರ್, ರಣ್ವೀರ್, ಶ್ವೇತ, ರೋಹಿಣಿ, ರಾಜ್ ಉದಯ್, ನಾಗಭೂಷಣ್, ನಾಗರತ್ನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.