ರಿಯಲ್ ಎಸ್ಟೇಟ್ ಸೇರಿದಂತೆ ಸಾರ್ವಜನಿಕರಿಗೆ ತೀವ್ರ ನಷ್ಟ

ಆರ್‌ಡಿಎ : ಹತ್ತು ತಿಂಗಳು ಕಳೆದರೂ ಒಂದೇ ಒಂದು ಸಭೆ – ನಿಯಮ ಉಲ್ಲಂಘನೆ
ರಾಯಚೂರು.ಏ.೧೬- ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆಡಳಿತ ಸಮಿತಿ ನೇಮಕಗೊಂಡು ಹತ್ತು ತಿಂಗಳು ಕಳೆದರೂ, ಇಲ್ಲಿವರೆಗೆ ಕೇವಲ ಒಂದೇ ಒಂದು ಸಭೆ ಕೈಗೊಂಡಿರುವುದು ಸಾರ್ವಜನಿಕರಲ್ಲಿ ಅದರಲ್ಲೂ ವಿಶೇಷವಾಗಿ ಲೇಔಟ್ ಮಾಲೀಕರು ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಅನುಮತಿಗಳ ನಿರೀಕ್ಷೆಯಲ್ಲಿರುವ ಜನ ಭಾರೀ ತೊಂದರೆಗೆ ಸಿಕ್ಕುವಂತಾಗಿದೆ.
ಪ್ರಾಧಿಕಾರದ ನಿಯಮಾನುಸಾರ ಪ್ರತಿ ೨ ತಿಂಗಳಿಗೊಮ್ಮೆ ಸಭೆ ನಿರ್ವಹಿಸಬೇಕೆಂಬ ನಿಯಮವಿದ್ದರೂ, ಕಳೆದ ಹತ್ತು ತಿಂಗಳಿಂದ ಎರಡನೇ ಸಭೆ ನಡೆಯದಿರಲು ಕಾರಣವೇನು ಎನ್ನುವುದು ಸ್ವತಃ ನಾಮ ನಿರ್ದೇಶಿತಗೊಂಡ ಸದಸ್ಯರಿಗೆ ಗೊಂದಲವಿದೆ. ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವೈ.ಗೋಪಾಲ ರೆಡ್ಡಿ ಮತ್ತು ನಾಲ್ವರು ಸದಸ್ಯರನ್ನು ಸರ್ಕಾರದಿಂದ ನಾಮ ನಿರ್ದೇಶಿಸಿ, ೧೪ ಜೂನ್ ೨೦೨೦ ರಂದು ಆದೇಶಿಸಲಾಯಿತು. ಜೂನ್ ೧೫ ರಂದು ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರ ಸ್ವೀಕರಿಸಿದರು.
ಇದಾದ ನಂತರ ತಕ್ಷಣವೇ ಸಭೆ ನಿರ್ವಹಿಸಬೇಕಾಗಿತ್ತು. ಆದರೆ, ಅಕ್ಟೋಬರ್ ೫ ರಂದು ಪ್ರಥಮ ಸಭೆ ನಿರ್ವಹಿಸಲಾಯಿತು. ಇದಾದ ನಂತರ ಮತ್ತೇ ಯಾವುದೇ ಸಭೆ ನಡೆಯದಿರುವುದು ಪ್ರಾಧಿಕಾರದ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗಿದೆ. ಅಧಿಕಾರಿಗಳು ಮತ್ತು ಅಧಿಕಾರೇತರ ಆಡಳಿತ ಮಂಡಳಿಯ ಸಮಿತಿ ಇದ್ದರೂ, ಕಾಲ ಕಾಲಕ್ಕೆ ಸಭೆ ನಡೆಯದಿರುವುದರ ಹಿಂದಿನ ರಹಸ್ಯವೇನು?. ನಗರದಲ್ಲಿ ಕಳೆದ ಹತ್ತು ತಿಂಗಳಿಂದ ಅನೇಕ ಲೇಔಟ್ ಮತ್ತು ವಿವಿಧ ಕಟ್ಟಡ ನಿರ್ಮಾಣ ಪರವಾನಿಗೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆಯ ಕಡತಗಳು ಅಧ್ಯಕ್ಷ ಮತ್ತು ಆಯುಕ್ತರ ಮುಂದಿದ್ದರೂ, ಸಭೆ ನಡೆಯದಿರುವುದರಿಂದ ಈ ಎಲ್ಲಾ ಕಡತಗಳಿಗೆ ಅನುಮತಿ ದೊರೆಯದೆ, ಕಳೆದ ೬ ತಿಂಗಳಿಂದ ಯಾವುದೇ ಚಟುವಟಿಕೆಯಿಲ್ಲದೇ ಕಾಲ ಕಳೆಯುವಂತಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರ ನಗರದ ಅಭಿವೃದ್ಧಿಯ ಭಾಗವಾಗಿ ಕೆಲಸ ನಿರ್ವಹಿಸುತ್ತದೆಯೇ? ಅಥವಾ ಆಪ್ತರು, ಪರಮಾಪ್ತರು ಅಧಿಕಾರ ನೀಡುವ ಪುನರ್ವಸತಿ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆಯುಕ್ತರೊಬ್ಬರಿದ್ದು, ಅವರು ಈ ಸಮಿತಿಯ ಕಾರ್ಯದರ್ಶಿಗಳಾಗಿ ಅಧಿಕಾರ ನಿರ್ವಹಿಸುತ್ತಾರೆ. ಕಾಲ ಕಾಲಕ್ಕೆ ಅಧ್ಯಕ್ಷರಿಗೆ ಕಾನೂನು ನಿಯಮಗಳ ಮಾಹಿತಿ ನೀಡಿ, ಸಭೆಯ ಮಹತ್ವ ಮನವರಿಕೆ ಮಾಡುವುದು ಜವಾಬ್ದಾರಿ. ಆದರೆ, ಪ್ರಾಧಿಕಾರದ ಆಯುಕ್ತರು ಈ ವಿಷಯದಲ್ಲಿ ಸಂಪೂರ್ಣವಾಗಿ ವಿಫಲಗೊಂಡಿರುವುದು ನಗರದಲ್ಲಿ ಲೇಔಟ್ ಮತ್ತಿತರ ತತ್ಸಬಂಧಿ ವ್ಯವಹಾರಕ್ಕೆ ಸ್ವತಃ ನಗರಾಭಿವೃದ್ಧಿ ಪ್ರಾಧಿಕಾರ ಅಡ್ಡಿಯಾಗಿರುವುದು ಗಮನಾರ್ಹವಾಗಿದೆ.
ರಿಯಲ್ ಎಸ್ಟೇಟ್ ವ್ಯವಹಾರ ಅನೇಕರಿಗೆ ಉದ್ಯೋಗ ಸೌಲಭ್ಯ ಒದಗಿಸುವ ಪರ್ಯಾಯ ಉದ್ಯಮಿಯಾಗಿ ಬೆಳೆದಿದೆ. ಒಂದು ಲೇಔಟ್ ನಿರ್ಮಾಣ ಮತ್ತು ಅಲ್ಲಿಯ ನಿವೇಶನ ಮಾರಾಟ ಸರ್ಕಾರದ ಖಜಾನೆಗೆ ಕೋಟ್ಯಾಂತರ ರೂ. ಶುಲ್ಕ ಪಾವತಿಗೆ ಮಾರ್ಗವಾಗಿದೆ. ಅಲ್ಲದೇ, ಕೃಷಿಯೇತರ ಜಮೀನು ಪರಿವರ್ತನೆಯಿಂದ ಹಿಡಿದು ಲೇಔಟ್ ಅನುಮೋದನೆವರೆಗೆ ಎಲ್ಲಾ ಹಂತಗಳಲ್ಲಿ ಪಾವತಿಸುವ ಶುಲ್ಕ ಸರ್ಕಾರದ ಬೊಕ್ಕಸಕ್ಕೆ ಆದಾಯವಾಗಿದೆ. ಆದರೆ, ಇಷ್ಟೆಲ್ಲಾ ಸಂಪನ್ಮೂಲ ಸಂಗ್ರಹಕ್ಕೆ ಅವಕಾಶಗಳಿದ್ದರೂ, ಪ್ರಾಧಿಕಾರದ ಸಭೆ ನಡೆಯದಿರುವುದು ಅತ್ತ ಸರ್ಕಾರಕ್ಕೆ ಇತ್ತ ಜನರಿಗೆ ತೀವ್ರ ನಷ್ಟಕ್ಕೆ ಗುರಿಯಾಗುವಂತೆ ಮಾಡಿದೆ.
ಜನರಿಗಾಗಿ ಮತ್ತು ಅವರ ಅನುಕೂಲಕ್ಕಾಗಿ ಕಾರ್ಯ ನಿರ್ವಹಿಸಬೇಕಾದ ಪ್ರಾಧಿಕಾರ ಕಳೆದ ಹತ್ತು ತಿಂಗಳಲ್ಲಿ ಒಂದೇ ಸಭೆ ಮಾಡುವ ನಿರ್ಬಂಧದ ಹಿಂದಿನ ಕಾರಣವೇನು?. ಪ್ರಾಧಿಕಾರದ ಸಮಿತಿಯಲ್ಲಿ ಕೇವಲ ನಾಮ ನಿರ್ದೇಶಿತ ಸದಸ್ಯರು ಮಾತ್ರವಲ್ಲದೇ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರಾಯಚೂರು ಮತ್ತು ಗ್ರಾಮಾಂತರ ಕ್ಷೇತ್ರದ ಇಬ್ಬರು ಶಾಸಕರು ಸದಸ್ಯರಾಗಿದ್ದು, ಕಾಲ ಕಾಲಕ್ಕೆ ಪ್ರಾಧಿಕಾರದ ಸಭೆ ನಿರ್ವಹಿಸಲು ಸಾಧ್ಯವಾಗದಿದ್ದರೇ, ಇವರು ಸದಸ್ಯರಾಗಿರುವುದಾದರೂ ಏಕೆ?.
ಅಕ್ಟೋಬರ್ ೫ ರಂದು ನಡೆದ ಸಭೆಯ ನಡಾವಳಿಯನ್ನು ಮುಂದಿನ ಸಭೆಯಲ್ಲಿ ಅನುಮೋದನೆ ಪಡೆಯಬೇಕು. ಆದರೆ, ಮತ್ತೇ ಸಭೆ ನಡೆಯದಿರುವುದರಿಂದ ಅಕ್ಟೋಬರ್ ೫ ರ ಸಭೆ ನಿರ್ಣಯಗಳ ನಡಾವಳಿಗೆ ೬ ತಿಂಗಳು ಕಳೆದರೂ, ಅನುಮೋದನೆ ಇಲ್ಲದಿರುವುದು ವಿಚಿತ್ರವಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರ ಸರ್ಕಾರದ ಸಂಸ್ಥೆಯೋ ಅಥವಾ ಖಾಸಗಿ ಸಂಸ್ಥೆಯೋ ಎನ್ನುವುದನ್ನು ಪ್ರಾಧಿಕಾರದ ಆಯುಕ್ತರು, ಜಿಲ್ಲಾಧಿಕಾರಿಗಳೇ ಹೇಳಬೇಕು. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಾಧಿಕಾರದ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದರೇ, ಪ್ರಾಧಿಕಾರದ ಕಛೇರಿ ಸಿಬ್ಬಂದಿ, ಇತ್ಯಾದಿ ಖರ್ಚು ವೆಚ್ಚಗಳ ಉದ್ದೇಶವೇನು? ಎಂದು ಜನ ಕೇಳುವಂತೆ ಮಾಡಿದೆ.
ಸಭೆ ನಿರ್ವಹಣೆಗೆ ಸಂಬಂಧಿಸಿ ಕೆಲ ಪ್ರಾಧಿಕಾರದ ಕೆಲ ಅಧಿಕಾರಿಗಳನ್ನು ಕೇಳಿದರೇ, ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ತಮ್ಮ ಕರ್ತವ್ಯಲೋಪದಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಭೆ ನಡೆಸಿಲ್ಲವೆಂದು ಹೇಳುವ ಇವರ ಅಜ್ಞಾನಕ್ಕೆ ಅಚ್ಚರಿಯಾಗದಿರಲಾರದು. ಮಸ್ಕಿ ಚುನಾವಣೆ ಹೇಳುವುದಾದರೇ, ಮಾರ್ಚ್ ಅಂತ್ಯದಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಅಕ್ಟೋಬರ್ ೨೦೨೦ ರಿಂದ ಫೆಬ್ರವರಿ ೨೦೨೧ ರವರೆಗೆ ಸಭೆ ನಡೆಸಲು ಯಾವ ನೀತಿ ಸಂಹಿತೆ ಅಡ್ಡಿಯಾಗಿತ್ತು ಎನ್ನುವುದು ಪ್ರಾಧಿಕಾರದ ಅಧಿಕಾರಿಗಳೇ ಹೇಳಬೇಕು.
ಒಟ್ಟಾರೆಯಾಗಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರಿಗಳ ಮೇಲೆ ಹಿಡಿತ ಹೊಂದದಿರುವುದು ಮತ್ತು ಪ್ರಾಧಿಕಾರ ಸಭೆಗಳ ಮಹತ್ವ ದ ಮಾಹಿತಿ ಇಲ್ಲದಿರುವುದು ಈ ಅಸ್ತವ್ಯಸ್ತತೆಗೆ ಕಾರಣವಾಗಿದೆ. ಮಸ್ಕಿ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೇ.೨ ರವರೆಗೂ ಸಭೆ ನಡೆಸಲು ಅವಕಾಶವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜೂನ್ ೧೫ ಕ್ಕೆ ವೈ.ಗೋಪಾಲರೆಡ್ಡಿ ಮತ್ತು ನಾಮ ನಿರ್ದೇಶಿತ ಸದಸ್ಯರ ಒಂದು ವರ್ಷದ ಅವಧಿ ಪೂರ್ಣಗೊಳ್ಳುತ್ತಿದೆ. ಒಂದು ವರ್ಷದಲ್ಲಿ ಒಂದೇ ಒಂದು ಸಭೆ ನಡೆಸಿದ ಘನತೆ ನಗರಾಭಿವೃದ್ಧಿ ಪ್ರಾಧಿಕಾರದ ಇತಿಹಾಸವಾಗಿ ಉಳಿಯಲಿದೆ.
ಇನ್ನಾದರೂ ಆಯುಕ್ತರು, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಕಾಲ ಕಾಲಕ್ಕೆ ಸಭೆ ನಡೆಸುವಲ್ಲಿ ವಿಫಲವಾದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ನೀತಿ ಸಂಹಿತೆ ತೆರವಾಗುತ್ತಿದ್ದಂತೆ ಸಭೆ ನಿರ್ವಹಣೆಗೆ ಕ್ರಮ ಕೈಗೊಳ್ಳುವರೋ ಅಥವಾ ಇಲ್ಲವೋ ಎನ್ನುವುದು ಕಾದು ನೋಡಬೇಕಾಗಿದೆ.