ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಲ್ಲೆ ನಡೆಸಿ ಬಂಗಾರದ ಚೈನ್ ಕಿತ್ತುಕೊಂಡು ಪರಾರಿ

ಕಲಬುರಗಿ,ಮಾ.2-ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ಹಲ್ಲೆ ನಡೆಸಿ ಅವರ ಕೊರಳಲ್ಲಿದ್ದ 1.50 ಲಕ್ಷ ರೂ.ಮೌಲ್ಯದ 30 ಗ್ರಾಂ.ಬಂಗಾರದ ಚೈನ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ಪಶು ಆಸ್ಪತ್ರೆ ಹತ್ತಿರ ನಡೆದಿದೆ.
ನಗರದ ಗುಬ್ಬಿ ಕಾಲೋನಿಯವರಾದ ರಿಯಲ್ ಎಸ್ಟೇಟ್ ಉದ್ಯಮಿ ಸೋಮಶೆಖರ್ ಪಾಟೀಲ (54) ಎಂಬುವವರ ಮೇಲೆ ಹಲ್ಲೆ ನಡೆಸಿ ಬಂಗಾರದ ಚೈನ್ ಕಿತ್ತುಕೊಂಡು ಹೋಗಲಾಗಿದೆ.
ಸೋಮಶೇಖರ್ ಪಾಟೀಲ ಅವರು ತಮ್ಮ ಗೆಳೆಯರಾದ ಅರುಣಕುಮಾರ ಪಾಟೀಲ, ಶ್ರೀಪಾದರಾವ ಘಂಟೋಜಿ ಮತ್ತು ಗೋಪಾಲ ಬುಚನಳ್ಳಿ ಅವರ ಜೊತೆ ಕಾರಿನಲ್ಲಿ ಪಶು ಆಸ್ಪತ್ರೆ ಬಳಿ ಕುಳಿತಿದ್ದ ವೇಳೆ ಅಲ್ಲಿಗೆ ನಂಬರ್ ಪ್ಲೇಟ್ ಇಲ್ಲದ ಎರಿಟಿಗಾ ಕಾರಿನಲ್ಲಿ ಬಂದ 20 ರಿಂದ 25 ವರ್ಷ ವಯಸ್ಸಿನ ಮುಖಕ್ಕೆ ಮಾಸ್ಕ್ ಧರಿಸಿದ್ದ 6-7 ಜನ ಯುವಕರು ನಿಮ್ಮ ಜೊತೆ ತೆಗೆದುಕೊಳ್ಳುವುದಿದೆ ಎಂದು ಹೇಳಿದ್ದಾರೆ. ನನ್ನ ಫೋಟೋ ನಿನೇಕೆ ತೆಗೆದುಕೊಳ್ಳುವೆ ಎಂದು ಸೋಮಶೇಖರ್ ಅವರು ಪ್ರಶ್ನಿಸಿದಾಗ ಅವರು ಮತ್ತು ಅವರ ಗೆಳೆಯರು ಹಾಗೂ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿ 1.50 ಲಕ್ಷ ರೂ.ಮೌಲ್ಯದ ಬಂಗಾರದ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬಸವಂತರಾವ ಪಾಟೀಲ ಧಂಗಾಪೂರ ಮತ್ತು ಇತರರ ಕುಮ್ಮಕ್ಕಿನಿಂದ ಅಪರಿಚಿತರು ತಮ್ಮ ಮೇಲೆ ಹಲ್ಲೆ ನಡೆಸಿ ಬಂಗಾರದ ಚೈನ್ ಕಿತ್ತುಕೊಂಡು ಹೋಗಿದ್ದಾರೆ ಎಂದು ಸೋಮಶೇಖರ ಪಾಟೀಲ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.